ತಪ್ಪಾಗಿ ಬೇರೆ ಬಸ್ ಹತ್ತಿದ ಮುಸ್ಲಿಂ ದಂಪತಿ; ‘ಇದು ಅಫ್ಘಾನಿಸ್ತಾನವೇ, ಪಾಕಿಸ್ತಾನವೇ?’ ಎಂದು ಪ್ರಶ್ನಿಸಿದ ಕಂಡಕ್ಟರ್!
ವೀಡಿಯೋ ವೈರಲ್ ಆದ ಬೆನ್ನಲ್ಲೇ ಕಂಡಕ್ಟರ್ ವಿರುದ್ಧ ಆಕ್ರೋಶ; ಕ್ರಮಕ್ಕೆ ಆಗ್ರಹ

Photo: x/screengrab/@DEEPUVAJRAMUNI
ಬೆಂಗಳೂರು: ಕೆ.ಆರ್. ಪೇಟೆಗೆ ತೆರಳಬೇಕಿದ್ದ ಮುಸ್ಲಿಂ ದಂಪತಿ ತಪ್ಪಿ ಶಿವಮೊಗ್ಗಕ್ಕೆ ಹೋಗುವ ಕೆಎಸ್ಆರ್ಟಿಸಿ ಬಸ್ ಹತ್ತಿದ್ದಕ್ಕೆ ಕಂಡಕ್ಟರ್ ರೊಬ್ಬರು ಕೋಮು ಪ್ರಚೋದಿತವಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ‘ಇದು ಅಫ್ಘಾನಿಸ್ತಾನವೇ? ಪಾಕಿಸ್ತಾನವೇ?’ ಎಂಬ ಅವರ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
KA-42-F-2253 ನೋಂದಣಿ ಸಂಖ್ಯೆಯ ಬಸ್ಸಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವರದಿಗಳ ಪ್ರಕಾರ, ಮೌಲಾನಾ ಸಾಹೇಬ್ ಮತ್ತು ಅವರ ಪತ್ನಿ ಎಂದು ಗುರುತಿಸಲಾದ ದಂಪತಿ ಕೆ.ಆರ್. ಪೇಟೆಗೆ ತೆರಳಲು ಬಸ್ ಹತ್ತಿದ್ದರು. ಆದರೆ, ಅವರು ಹತ್ತಿದ್ದು ಶಿವಮೊಗ್ಗಕ್ಕೆ ತೆರಳುವ ಬಸ್ ಎಂಬುದು ಬಳಿಕ ತಿಳಿದುಬಂದಿದೆ.
ದಂಪತಿ ತಪ್ಪಾಗಿ ಬೇರೆ ಬಸ್ ಹತ್ತಿರುವುದನ್ನು ಗಮನಿಸಿದ ಕಂಡಕ್ಟರ್, ಬಸ್ಸಿನ ಮೇಲೆ ನಮೂದಿಸಿದ್ದ ಗಮ್ಯಸ್ಥಾನವನ್ನು ನೋಡದೆ ಏಕೆ ಬಸ್ ಹತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ, ‘ಇದು ಅಫ್ಘಾನಿಸ್ತಾನವೇ? ಪಾಕಿಸ್ತಾನವೇ?’ ಎಂದು ಕೇಳುವ ಮೂಲಕ ಕೋಮು ಪ್ರಚೋದಿತ ಟೀಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ವೀಡಿಯೊ ನ. 9ರ ಸೋಮವಾರ ಸಂಜೆ ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊ ವೈರಲ್ ಆಗುತ್ತಿದ್ದಂತೆ ಕಂಡಕ್ಟರ್ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ಆರೋಪಿತ ಕಂಡಕ್ಟರ್ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ.
ಆನ್ಲೈನ್ನಲ್ಲಿ ಹಂಚಿಕೊಳ್ಳಲಾಗಿರುವ ವೀಡಿಯೊದಲ್ಲಿ ಘಟನೆ ನಡೆದ ದಿನಾಂಕ ನಮೂದಾಗಿಲ್ಲ. ಆದರೆ, ನವೆಂಬರ್ 9ರ ಸೋಮವಾರ ಸಂಜೆ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.






