‘ಬಿಡದಿ ಟೌನ್‍ಶಿಪ್’ ಏಕಾಏಕಿಯಾಗಿ ಅಧಿಕಾರಿಗಳು ಸರ್ವೆ ಮಾಡಲು ಬಂದಿರುವುದು ಸರಿಯಲ್ಲ : ಕುಮಾರಸ್ವಾಮಿ

ಬೆಂಗಳೂರು : ಬಿಡದಿ ಟೌನ್‍ಶಿಪ್ ಯೋಜನೆ ವಿರೋಧಿಸಿ ಮಂಡಹಳ್ಳಿ ಗ್ರಾಮದ ರೈತರ ಆಕ್ರೋಶಕ್ಕೆ ರಾಜ್ಯ ಸರಕಾರದ ರೈತ ವಿರೋಧಿ ಧೋರಣೆಯೇ ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.
ಸೋಮವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರಕಾರದ ಚಿತಾವಣೆಯಿಂದ ಬಿಡದಿ ಟೌನ್‍ಶಿಪ್‍ಗೆ ಜೆಎಂಸಿ ಸರ್ವೆ ನಡೆಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ತೆರಳಿದ್ದು, ಅವರ ವಿರುದ್ಧ ರೈತ ಮಹಿಳೆಯರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಭೂಮಿ ಕಳೆದುಕೊಳ್ಳುತ್ತಿರುವ ಭೀತಿಯಲ್ಲಿರುವ ರೈತರು ಸುಮಾರು 500 ದಿನಗಳಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದರು. ಏಕಾಏಕಿಯಾಗಿ ಅಧಿಕಾರಿಗಳು ಸರ್ವೆ ಮಾಡಲು ಬಂದಿರುವುದು ಸರಿಯಲ್ಲ. ಈ ವೇಳೆ ಸಹಜವಾಗಿಯೇ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸರಕಾರದ ಬೇಜವಾಬ್ದಾರಿ ಮತ್ತು ಚಿತಾವಣೆಯೇ ಕಾರಣ ಎಂದು ಅವರು ದೂರಿದರು.
ರೈತರು ಯಾವುದೇ ಕಾರಣಕ್ಕೂ ಕೆಟ್ಟ ಘಟನೆಗಳಿಗೆ ಅವಕಾಶ ಕೊಡಬಾರದು, ಶಾಂತಿಯುತ ಹೋರಾಟ ಮುಂದುವರೆಸಬೇಕು. ಕಾನೂನು ರೀತಿಯಲ್ಲಿನ ಹೋರಾಟ ಮಾಡುವುದಕ್ಕೆ ಅನೇಕರು ದನಿಗೂಡಿಸಿದ್ದಾರೆ. ರೈತ ಮಹಿಳೆಯರ ಮೇಲೆ ಪೊಲೀಸರು ನಡೆಸಿರುವ ದೌರ್ಜನ ಸಲ್ಲ. ಯಾವುದೇ ಕಾರಣಕ್ಕೆ ಸರಕಾರದ ದರ್ಪಕ್ಕೆ ಹೆದರಿ ಪೊಲೀಸರು ರೈತ ವಿರೋಧಿ ನೀತಿ ಅನುಸರಿಸಬಾರದು ಎಂದು ಕುಮಾರಸ್ವಾಮಿ ತಿಳಿಸಿದರು.
ಪೊಲೀಸರು ಎಚ್ಚರಿಕೆಯಿಂದ ಇರಬೇಕು. ಸರಕಾರ ಈ ರೀತಿಯಲ್ಲಿ ಮೃಗೀಯವಾಗಿ ವರ್ತಿಸಬಾರರು. ಸರಕಾರದ ಆದೇಶದ ಮೇರೆಗೆ ಅಧಿಕಾರಿಗಳು ಸರ್ವೇ ಮಾಡಲು ಬಂದಿದ್ದು, ರೈತರ ಕೃಷಿ ಭೂಮಿ ಕಸಿದುಕೊಳ್ಳಲು ಬಂದರೆ ರೈತರು ಸುಮ್ಮನಿರಲು ಹೇಗೆ ಸಾಧ್ಯ ಎಂದು ಕುಮಾರಸ್ವಾಮಿ ಇದೇ ವೇಳೆ ಪ್ರಶ್ನೆ ಮಾಡಿದರು.






