‘ಕುಮಾರಸ್ವಾಮಿ ಮನವೊಲಿಕೆ’; ಧರಣಿ ಕೈಬಿಟ್ಟ ಬಿಡದಿ ರೈತ ಮಹಿಳೆಯರು

ಬೆಂಗಳೂರು : ತಮ್ಮ ಮೇಲೆ ನಡೆದ ಪೊಲೀಸರ ದಬ್ಬಾಳಿಕೆಯನ್ನು ಖಂಡಿಸಿ ಭೈರಮಂಗಲದ ರೈತರು ಮತ್ತು ರೈತ ಮಹಿಳೆಯರು ಚನ್ನಪಟ್ಟಣದ ಪೊಲೀಸ್ ಭವನದಲ್ಲಿ ಮುಂದುವರಿಸಿದ್ದ ಧರಣಿಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮನವೊಲಿಸಿದ ನಂತರ ಹಿಂಪಡೆದಿದ್ದಾರೆ.
ಶನಿವಾರ ಬಿಡದಿ ಉಪನಗರ ಯೋಜನೆ ವಿರೋಧಿಸಿ ಬೈರಮಂಗಲ ಭಾಗದ ಹಳ್ಳಿಗಳ ರೈತರು, ರೈತ ಮಹಿಳೆಯರು 568 ದಿನಗಳಿಂದ ಬೈರಮಂಗಲ ವೃತದಲ್ಲಿ ಧರಣಿ ನಡೆಸುತ್ತಿದ್ದು, ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ಕೂತಿದ್ದರು. ಆದರೆ ಬಿಸಿಲಿನ ಕಾರಣಕ್ಕೆ ಪೆಂಡಾಲ್ ಹಾಕಿಕೊಂಡು ಸತ್ಯಾಗ್ರಹ ಕೂರಲು ಪ್ರಯತ್ನಿಸಿದ್ದ ರೈತರನ್ನು ಪೊಲೀಸರು ಏಕಾಏಕಿ ವಶಕ್ಕೆ ಪಡೆದಿದ್ದು, ಆಕ್ರೋಶಕ್ಕೆ ಕಾರಣವಾಗಿತ್ತು.
ಈ ವಿಷಯ ತಿಳಿದು ಕೂಡಲೇ ರೈತರೊಂದಿಗೆ ಮಾತುಕತೆ ನಡೆಸಿ ರೈತರಿಗೆ ಧೈರ್ಯ ಹೇಳಿದ ಕೇಂದ್ರ ಸಚಿವ ಕುಮಾರಸ್ವಾಮಿ, ಚನ್ನಪಟ್ಟಣದ ಪೊಲೀಸ್ ಭವನಕ್ಕೆ ತೆರಳಿ ಪ್ರತಿಭಟನಾನಿರತರಿಗೆ ಸಾಂತ್ವನ ಹೇಳಿದರು. ಪ್ರತಿಭಟನೆ ಹಿಂಪಡೆದು ಬೈರಮಂಗಲದಲ್ಲಿಯೇ ಶಾಂತಿಯುತವಾಗಿ ಹೋರಾಟ ಮುಂದುವರಿಸುವಂತೆ ಕೋರಿದರು. ಅಲ್ಲದೆ, ಬಿಡದಿಯ ಭಾಗದ ಭೂಮಿಯ ವಶಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಇದೇ ವೇಳೆ ರೈತರು ಹಾಗೂ ರೈತ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇನ್ನಿತರ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ರೈತ ಮಹಿಳೆಯರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದು, ಅವರೆಂದು ಕಾನೂನನ್ನು ಕೈಗೆತ್ತುಕೊಂಡು ಹೋರಾಟ ಮಾಡಿದವರಲ್ಲ ಎಂದು ಹೇಳಿದರು.
ನಿಮಗೆ ಎರಡು ದಿನ ಸಮಯ ಕೊಡುತ್ತಿದ್ದೇನೆ. ಕ್ರಮ ಕೈಗೊಳ್ಳದಿದ್ದರೆ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಕುಮಾರಸ್ವಾಮಿ, ಕಳ್ಳಕಾಕರು, ಭೂಗಳ್ಳರನ್ನು ಸುಮ್ಮನೆ ಬಿಡುತ್ತೀರಿ. ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಅಮಾಯಕ ರೈತ ಮಹಿಳೆಯರ ಮೇಲೆ ನಿಮ್ಮ ದರ್ಪ ತೋರಿಸಲು ಹೋಗುತ್ತೀರಿ ಎಂದು ಟೀಕಿಸಿದರು.
ಈ ವೇಳೆ ಮಾಜಿ ಸಚಿವರಾದ ಬಂಡೆಪ್ಪ ಕಾಶಂಪುರ್, ವೆಂಕಟರಾವ್ ನಾಡಗೌಡ, ಶಾಸಕರಾದ ಮಂಜೇಗೌಡ, ಎಂ.ಟಿ ಕೃಷ್ಣಪ್ಪ, ಸಂಸದ ಮಲ್ಲೇಶ್ ಬಾಬು, ಮಾಜಿ ಶಾಸಕರಾದ ಎ.ಮಂಜುನಾಥ್, ರಾಜವೆಂಕಟಪ್ಪ ನಾಯಕ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಎಚ್.ಎಂ. ರಮೇಶ್ ಗೌಡ, ಕೆ.ಎ.ತಿಪ್ಪೇಸ್ವಾಮಿ ಹಾಜರಿದ್ದರು.






