ನಾನು ಸಿಎಂ ಆದಾಗ ಡಿ.ಕೆ.ಶಿವಕುಮಾರ್ ಸಹಿಸಿಕೊಳ್ಳಲಿಲ್ಲ ಏಕೆ?: ಕುಮಾರಸ್ವಾಮಿ

ಬೆಂಗಳೂರು : ನಾನು ಮುಖ್ಯಮಂತ್ರಿಯಾದ ಮೇಲೆ ಡಿ.ಕೆ.ಶಿವಕುಮಾರ್ ಸಹಿಸಿಕೊಳ್ಳಲು ಏಕೆ ಸಾಧ್ಯವಾಗಲಿಲ್ಲ?. ಅಷ್ಟೇ ಅಲ್ಲದೆ, ನನ್ನ ಸರಕಾರ ತೆಗೆಯಲು ಯಾರು ಏನು ಮಾಡಿದರು ಎಂಬುದೆಲ್ಲಾ ನನಗೆ ಗೊತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಯಾವತ್ತೂ ಕುಮಾರಸ್ವಾಮಿಯವರಿಗೆ ಕೆಟ್ಟದ್ದನ್ನು ಬಯಸಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿರುವುದನ್ನು ನಾನು ಕೂಡ ಮಾಧ್ಯಮಗಳ ಮೂಲಕ ಗಮನಿಸಿದ್ದೇನೆ. ಆದರೆ, ಮೈತ್ರಿ ಸರಕಾರದ ಕಾಲದಲ್ಲಿ ಅವರು ನನ್ನಿಂದ ಏನೇನು ಪಡೆದುಕೊಂಡರು ಮತ್ತು ಕೊನೆಗೆ ನನಗೆ ಏನನ್ನು ಬಳುವಳಿಯಾಗಿ ನೀಡಿದರು ಎಂಬುದು ನನಗಿಂತ ರಾಜ್ಯದ ಜನರಿಗೆ ಬಹಳ ಚೆನ್ನಾಗಿ ಗೊತ್ತಿದೆ ಎಂದು ಟೀಕಿಸಿದರು.
ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ್ದ ಜನತಾ ಪರಿವಾರದ ನಾಯಕರು ವಾಪಸ್ ಮಾತೃಪಕ್ಷಕ್ಕೆ ಬಂದರೆ ನಾನು ಸ್ವಾಗತಿಸುತ್ತೇನೆ. ಸದ್ಯದ ಸರಕಾರ ನಡೆಯುತ್ತಿರುವ ರೀತಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕತ್ವದ ವಿರುದ್ಧ ತೀವ್ರ ಅತೃಪ್ತಿ ಹೊಂದಿರುವ ಅನೇಕ ನಾಯಕರು ಜೆಡಿಎಸ್ಗೆ ವಾಪಸ್ ಆಗುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದ ಅವರು, ಕೇಂದ್ರ ಸರಕಾರವನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಳ್ಳುವ ಬದಲು, ರಾಜ್ಯದ ಜನತೆ ನೀಡುವ ತೆರಿಗೆ ಹಣವನ್ನು ರಾಜ್ಯದ ಬೊಕ್ಕಸದಿಂದಲೇ ಜನೋಪಯೋಗಿ ಯೋಜನೆಗಳಿಗೆ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.






