ಸ್ಟಿಂಗ್ ಕಥೆಯ ಡೈರೆಕ್ಟರ್, ಪ್ರೊಡ್ಯೂಸರ್, ಆ್ಯಕ್ಟರ್ ಎಲ್ಲವೂ ಕುಮಾರಸ್ವಾಮಿ : ಎಂ.ಲಕ್ಷ್ಮಣ್
"ಮೋದಿ ಅನುಮತಿ ಪಡೆದು ಎಚ್‍ಡಿಕೆ ಮನೆಯಲ್ಲಿ ವಿಡಿಯೋ ಅಪ್ಲೋಡ್ ; 29 ಲಕ್ಷ ರೂ. ವಹಿವಾಟು"

ಬೆಂಗಳೂರು : ಮುಂಬರಲಿರುವ 2028ರ ಚುನಾವಣೆಯಲ್ಲಿ ರಾಜ್ಯದ ಅಧಿಕಾರ ಹಿಡಿಯುವ ದುರುದ್ದೇಶದಿಂದ ಎಚ್.ಡಿ.ಕುಮಾರಸ್ವಾಮಿಗೆ ಮೋದಿ ಮತ್ತು ಅಮಿತ್ ಶಾ ಸುಪಾರಿ ಕೊಟ್ಟಿದ್ದಾರೆ. ‘ಸ್ಟಿಂಗ್’ ಕಥೆಯ ಡೈರೆಕ್ಟರ್, ಪ್ರೊಡ್ಯೂಸರ್ ಮತ್ತು ಆ್ಯಕ್ಟರ್ ಎಲ್ಲವೂ ಕುಮಾರಸ್ವಾಮಿಯವರೇ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2026ರ ಆಗಸ್ಟ್ 27ರಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಪ್ರಧಾನಿ ಮೋದಿ ಭೇಟಿಯಾಗಿ ಸಿದ್ದರಾಮಯ್ಯ ಅವರದ್ದು ಎನ್ನಲಾದ ಸ್ಟಿಂಗ್ ವಿಡಿಯೋ ತೋರಿಸಿ, ರಾಜ್ಯದಲ್ಲಿ ಕಾಂಗ್ರೆಸ್ ಸಂಹಾರಕ್ಕೆ ಅನುಮತಿ ಕೇಳಿದ್ದರು. ಆಗ ಮೋದಿ ಅವರು ‘ಗೋ ಅಹೆಡ್’ ಎಂದಿದ್ದರು ಎಂದು ಕುಮಾರಸ್ವಾಮಿ ಅವರೇ ಆಪ್ತರ ಬಳಿ ಹೇಳಿರುವ ಆಡಿಯೋ ಸಾಕ್ಷಿ ತಮ್ಮ ಬಳಿ ಇದೆ ಎಂದರು.
ಸ್ಟಿಂಗ್ ವಿಡಿಯೋ ಸಂಬಂಧ ಪ್ರಧಾನಿ ಮೋದಿಯವರ ಅನುಮತಿ ಪಡೆದು ಎಚ್.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲಿಯೇ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಅದಕ್ಕಾಗಿ 29 ಲಕ್ಷ ರೂ. ಹಣಕಾಸಿನ ವಹಿವಾಟು ನಡೆದಿದೆ ಎಂದು ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.
ಒಂದು ತಿಂಗಳಿಂದ ಎಚ್.ಡಿ.ಕುಮಾರಸ್ವಾಮಿ ಹಲವಾರು ಸುದ್ದಿಗೋಷ್ಠಿಗಳನ್ನು ನಡೆಸಿ ರಾಜ್ಯದ ಮರ್ಯಾದೆ ಹರಾಜು ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಜನಪ್ರಿಯತೆ ಸಹಿಸಲಾಗದೆ, 2028ಕ್ಕೆ ಅಧಿಕಾರ ಹಿಡಿಯುವ ದುರುದ್ದೇಶದಿಂದ ಎಚ್.ಡಿ.ಕುಮಾರಸ್ವಾಮಿ ಕುತಂತ್ರ ಎಣೆಯುತ್ತಿದ್ದರು. ಈಗ ಕುಮಾರಸ್ವಾಮಿ ಎಣೆದ ಬಲೆಯಲ್ಲಿ ಅವರೇ ಸಿಲುಕಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಎಂ.ಲಕ್ಷ್ಮಣ್ ತಿಳಿಸಿದರು.
ಸ್ಟಿಂಗ್ ಕೆಲಸಕ್ಕಾಗಿ ಪ್ರಜ್ವಲ್ ಪ್ರಸಾದ್, ರಿತೇಶ್ ಹಾಗೂ ವಿನೋದ್ ಎಂಬುವವರನ್ನು ಎಚ್.ಡಿ. ಕುಮಾರಸ್ವಾಮಿ ನೇಮಿಸಿಕೊಂಡಿದ್ದರು. ಇವರಿಗೆ 1 ಲಕ್ಷದಿಂದ 2 ಲಕ್ಷ ರೂ.ಗಳ ವರೆಗೆ ಸಂಬಳ ನಿಗದಿ ಮಾಡಲಾಗಿತ್ತು. ಬಾಗೇಪಲ್ಲಿ ಪ್ರಶಾಂತ್ ಮೂಲಕ ವಿಡಿಯೋ ಪಡೆದು, ರಿತೇಶ್ ಮತ್ತು ವಿನೋದ್‍ಗೆ 50 ಸಾವಿರ ರೂ.ನೀಡಿ ಹೊಸ ಮೊಬೈಲ್ ಖರೀದಿಸಲಾಗಿತ್ತು. ಆ ಮೊಬೈಲ್‍ನಿಂದ ಕುಮಾರಸ್ವಾಮಿ ಅವರ ಸಮ್ಮುಖದಲ್ಲೇ ದಿಲ್ಲಿಯ ನಿವಾಸದಿಂದ ವಿಡಿಯೋ ಅಪ್‍ಲೋಡ್ ಮಾಡಲಾಗಿದೆ ಎಂದು ಬಂಧಿತ ಆರೋಪಿ ರಿತೇಶ್ ಸ್ವತಃ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಅಲ್ಲದೆ, ಈ ಮೂವರ ಖಾತೆಗಳಿಂದ ಮೂರು ದಿನಗಳಲ್ಲಿ 29 ಲಕ್ಷ ರೂ. ಹಣಕಾಸಿನ ವಹಿವಾಟು ನಡೆದಿದೆ. ಈ ಹಣ ಯಾರದ್ದು ಎಂದು ಎಂ.ಲಕ್ಷ್ಮಣ್ ಪ್ರಶ್ನಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರಾಥಮಿಕ ವರದಿಯ ಆಧಾರದ ಮೇಲೆ ತಾಂತ್ರಿಕ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದ್ದಾರೆ. ಅವರು ಹೇಳಿರುವುದು ಕೇವಲ ಶೇ.10ರಷ್ಟು ಸತ್ಯವಷ್ಟೇ. ಮುಂಬರುವ ಗುರುವಾರ ಅಥವಾ ಶುಕ್ರವಾರದ ವೇಳೆಗೆ ಪೊಲೀಸ್ ಆಯುಕ್ತರು ಸ್ಟಿಂಗ್ ಕುರಿತಾದ ಮತ್ತಷ್ಟು ಮಹತ್ವದ ವಿವರಗಳನ್ನು ಬಹಿರಂಗಪಡಿಸಲಿದ್ದಾರೆ. ಬೇರೆಯವರ ಮನೆ ಮೇಲೆ ಎಸೆಯಲು ಹೋದ ಬಾಂಬ್ ಈಗ ಕುಮಾರಸ್ವಾಮಿ ಅವರ ಮನೆ ಮೇಲೆಯೇ ಬಿದ್ದಿದೆ ಎಂದು ಎಂ.ಲಕ್ಷ್ಮಣ್ ಲೇವಡಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.






