ರಾಜ್ಯದ ಅಭಿವೃದ್ಧಿಗೆ ಕುಮಾರಸ್ವಾಮಿ ಕೊಡುಗೆ ಶೂನ್ಯ : ರಮೇಶ್ ಬಾಬು

ರಮೇಶ್ ಬಾಬು
ಬೆಂಗಳೂರು : ಕೇಂದ್ರ ಬಿಜೆಪಿ ಸರಕಾರದ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರಕಾರ ತಮಗೆ ಶಿಷ್ಟಾಚಾರಕ್ಕೆ ಅನುಗುಣವಾಗಿ ನಿಗದಿತ ಸಮಯದಲ್ಲಿ ಹೊಸ ಕಾರನ್ನು ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಕೇಂದ್ರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ಪಡೆದು ಆರು ತಿಂಗಳು ಕಳೆದರೂ ಇಲ್ಲಿಯವರೆಗೆ ರಾಜ್ಯದ ಅಭಿವೃದ್ಧಿಗೆ ಇವರು ನೀಡಿರುವ ಕೊಡುಗೆ ಶೂನ್ಯ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ಶನಿವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಣ್ಣ ಸಣ್ಣ ವಿಷಯಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿ ಪ್ರಚಾರ ಪಡೆಯಲು ಮುಂದಾಗಿದ್ದಾರೆ. ರಾಜ್ಯ ಸರಕಾರದ ವತಿಯಿಂದ ಕುಮಾರಸ್ವಾಮಿಗೆ ಅವರ ಅಪೇಕ್ಷೆಯಂತೆ ಹೊಸ ಟೊಯೋಟಾ ಇನ್ನೋವಾ ಹೈಕ್ರಾಸ್ ವಾಹನ ಹಂಚಿಕೆ ಆಗಿದೆ ಎಂದು ತಿಳಿಸಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಹೊಸ ಕಾರನ್ನು ಪಡೆಯಲು ಕೇಂದ್ರ ಸಚಿವರನ್ನು ಕೋರಿದ್ದು, ಧನುರ್ ಮಾಸದ ಕಾರಣ ನೀಡಿ ಸಂಕ್ರಾಂತಿಯ ನಂತರ ಹೊಸ ಕಾರು ಪಡೆಯುವುದಾಗಿ ತಿಳಿಸಿದ್ದಾರೆ. ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಳೆದ ನ.4ರಂದು ಕುಮಾರಸ್ವಾಮಿಯ ಹೊಸ ವಾಹನದ ಪ್ರಸ್ತಾಪಕ್ಕೆ ಅನುಗುಣವಾಗಿ ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಸುಮಾರು 6 ಸಂಸದರಿಗೆ ಆರ್ಥಿಕ ಮಿತಿಯೊಳಗೆ ವಾಹನಗಳನ್ನು ಖರೀದಿಸಲು ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಅದಕ್ಕೆ ಅನುಗುಣವಾಗಿ ವಾಹನ ಖರೀದಿ ಮಾಡಿ, ಹೊಸ ಕಾರು ಪಡೆಯಲು ಮಾಹಿತಿ ನೀಡಲಾಗಿದೆ. ಹಿಂದಿನ ಇನ್ನೋವಾ ಕ್ರಿಸ್ಟಾ ಕಾರನ್ನು ಬಳಸಲು ಕುಮಾರಸ್ವಾಮಿ ನಿರಾಕರಿಸಿ ಹೊಸ ಇನ್ನೋವಾ ಹೈಕ್ರಾಸ್ ಕಾರಿಗೆ ಬೇಡಿಕೆ ಸಲ್ಲಿಸಿದ್ದು, ಕೆಎ 59 ಜಿ 0099 ಕಾರು ಹಂಚಿಕೆ ಆಗಿದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.
ಇದರ ಜೊತೆಗೆ ಕೆಲವು ಸಿಬ್ಬಂದಿಯನ್ನು ಎರವಲು ಸೇವೆಯ ಮೇಲೆ ರಾಜ್ಯ ಸರಕಾರದಿಂದ ಪಡೆದುಕೊಂಡಿದ್ದಾರೆ. ಆದರೆ ಇಂತಹ ವಿಚಾರಗಳನ್ನು ಇಟ್ಟುಕೊಂಡು ರಾಜ್ಯ ಸರಕಾರವನ್ನು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿ ಮತ್ತು ಇತರರನ್ನು ಟೀಕಿಸುವ ಮೂಲಕ ತಮ್ಮ ನಾಯಕತ್ವಕ್ಕೆ ಅವರೇ ಮಸಿ ಬಳಿದುಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ರಾಜ್ಯದ 2023ರ ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಕುಮಾರಸ್ವಾಮಿ ಪದೇ ಪದೇ ವ್ಯಕ್ತಿಗತ ಟೀಕೆಗಳಿಗೆ ಮುಂದಾಗುವುದರ ಮೂಲಕ ತಮ್ಮ ಹತಾಶ ಭಾವನೆಯನ್ನು ತೋರುತ್ತಿದ್ದಾರೆ. ಅವರು ತಮಗೆ ದೊರೆತಿರುವ ಅವಕಾಶಗಳನ್ನು ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಮುಂದಾಗಲಿ. ಇಂತಹ ಸಾರ್ವಜನಿಕ ಪ್ರಾಮುಖ್ಯತೆ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸಿ ಮುಜುಗರಕ್ಕೆ ಒಳಗಾಗುವ ಬದಲು, ಆರೋಗ್ಯಕರ ಚರ್ಚೆಗಳಿಗೆ ಒತ್ತು ನೀಡಿ ರಾಜ್ಯದ ಅಭಿವೃದ್ಧಿಗೆ ಮುಂದಾಗಲಿ ಎಂದು ರಮೇಶ್ ಬಾಬು ಆಗ್ರಹಿಸಿದ್ದಾರೆ.







