ಪಹಲ್ಗಾಮ್‍ನಲ್ಲಿ ದಾಳಿ | ಕೇಂದ್ರ ಸರಕಾರ ಆದಷ್ಟು ಬೇಗ ಪಿಒಕೆಯನ್ನು ವಶಕ್ಕೆ ಪಡೆಯಬೇಕು : ಲಕ್ಷ್ಮಣ್ ಸವದಿ

ಬೆಳಗಾವಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ಉಗ್ರರ ದಾಳಿಯನ್ನು ಯಾರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ಕೇಂದ್ರ ಸರಕಾರ ಆದಷ್ಟು ಬೇಗನೆ ಪಿಒಕೆಯನ್ನು ವಶಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಭಾರತೀಯ ಪ್ರಜೆಗಳಾಗಿ ಒಟ್ಟಾಗಿದ್ದು, ಇಂತಹ ಅಹಿತಕರ ಘಟನೆಗಳನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ. ಉಗ್ರಗಾಮಿಗಳನ್ನು ನಿಗ್ರಹ ಮಾಡಲು ಕೇಂದ್ರ ಸರಕಾರ ಮೊದಲು ಪಿಒಕೆಯನ್ನು ವಶಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಬಹಳ ದೊಡ್ಡದಾಗಿ ಬೆಳೆಯುತ್ತಿದೆ. ಇಲ್ಲಿರುವ ಸಾರ್ವಜನಿಕರು ನೆಮ್ಮದಿಯಿಂದ ಜೀವನ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಎಂದರೆ ಅದು ಭೂಲೋಕದ ಸ್ವರ್ಗ ಎಂದು ಪ್ರಖ್ಯಾತಿಯನ್ನು ಪಡೆದಿದೆ. ನಾನು ಕೂಡ ಕಳೆದ ಆರು ತಿಂಗಳ ಹಿಂದೆ ಭೇಟಿ ನೀಡಿದ್ದೆ. ಈ ಘಟನೆಯಿಂದಾಗಿ ಅಲ್ಲಿನ ಪ್ರವಾಸೋದ್ಯಮ ಕುಗ್ಗಿದೆ ಎಂದು ಹೇಳಿದರು.
ಈ ಉಗ್ರಗಾಮಿಗಳ ನಿರ್ಮೂಲನೆಗೆ ನಾವು ಎಲ್ಲರೂ ಒಗ್ಗಟ್ಟಾಗಿ ಬೆಂಬಲವನ್ನು ನೀಡುತ್ತೇವೆ. ಈಗಾಗಲೇ ಕೇಂದ್ರ ಸರಕಾರ ಪಾಕಿಸ್ತಾನ ವಿರುದ್ಧ ರಾಜತಾಂತ್ರಿಕ ನಿರ್ಣಯಗಳನ್ನು ಕೈಗೊಂಡಿದೆ. ನಾನು ನನ್ನ ಬೆಂಬಲವನ್ನು ನೀಡುತ್ತೇನೆ ಎಂದೂ ಅವರು ಉಲ್ಲೇಖಿಸಿದರು.







