ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ವಕೀಲರು ವೃತ್ತಿ ನಡೆಸುವಂತಿಲ್ಲ: ರಾಜ್ಯ ವಕೀಲರ ಪರಿಷತ್ ಆದೇಶ

ಸಾಂದರ್ಭಿಕ ಚಿತ್ರ
ಬೆಂಗಳೂರು : ವಕೀಲರಾಗಿ ನೋಂದಾಯಿಸಿಕೊಂಡ ಎರಡು ವರ್ಷಗಳೊಳಗೆ ಅಖಿಲ ಭಾರತ ವಕೀಲರ ಪರೀಕ್ಷೆ(ಎಐಬಿಇ) ಉತ್ತೀರ್ಣರಾಗದವರು ತಕ್ಷಣದಿಂದಲೇ ವಕೀಲ ವೃತ್ತಿ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ತಿಳಿಸಿದೆ.
ರವಿವಾರ ಈ ಸಂಬಂಧ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ರಾಜಣ್ಣ ಆರ್.ಸುತ್ತೋಲೆ ಹೊರಡಿಸಿದ್ದು, ಹೈಕೋರ್ಟ್ನ ಅ.17ರ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 2009-10ನೇ ಶೈಕ್ಷಣಿಕ ವರ್ಷದವರೆಗೆ (12.06.2010ರೊಳಗೆ) ಕಾನೂನು ಪದವಿ ಪೂರ್ಣಗೊಳಿಸಿ ವಕೀಲರಾಗಿ ನೋಂದಾಯಿಸಿಕೊಂಡವರಿಗೆ ಎಐಬಿಇ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ ಎಂದಿದ್ದಾರೆ.
ಆದರೆ, 2010ರ ಜೂ.12ರ ನಂತರ ಕಾನೂನು ಪದವಿ ಪೂರ್ಣಗೊಳಿಸಿ ವಕೀಲರಾಗಿ ನೋಂದಾಯಿಸಿಕೊಂಡವರು ನೋಂದಣಿ ದಿನಾಂಕದಿಂದ ಎರಡು ವರ್ಷಗಳೊಳಗೆ ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗದವರು ಉತ್ತೀರ್ಣರಾಗುವವರೆಗೆ ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಪ್ರಾಧಿಕಾರದ ಮುಂದೆ ವಕೀಲ ವೃತ್ತಿ ನಡೆಸುವಂತಿಲ್ಲ. ವಕಾಲತ್ತು ಸಲ್ಲಿಸುವುದಕ್ಕೂ ಅವಕಾಶವಿರುವುದಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಕೀಲರ ಕಾಯ್ದೆ 1961ರ ಸೆಕ್ಷನ್ 45 ಹಾಗೂ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 318, 319 ಮತ್ತು 61ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ. ಶಿಸ್ತು ಕ್ರಮದ ಜೊತೆಗೆ ಕ್ರಿಮಿನಲ್ ಪ್ರಕರಣಗಳನ್ನೂ ದಾಖಲಿಸಬಹುದು. ರಾಜ್ಯದ ಎಲ್ಲ ವಕೀಲರ ಸಂಘಗಳು ಹೊಸ ಸದಸ್ಯರನ್ನು ಸೇರ್ಪಡೆಗೊಳಿಸುವಾಗ ಅಥವಾ ಹಳೆಯ ಸದಸ್ಯತ್ವವನ್ನು ನವೀಕರಿಸುವಾಗ ಎಐಬಿಇ ಉತ್ತೀರ್ಣ ಪ್ರಮಾಣಪತ್ರ ಮತ್ತು ಸಿರ್ಟಿಫಿಕೇಟ್ ಆಫ್ ಪ್ರಾಕ್ಟೀಸ್ ಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಈ ಸುತ್ತೋಲೆಯನ್ನು ಸಂಘಗಳ ಸೂಚನಾ ಫಲಕಗಳಲ್ಲಿ ಪ್ರಕಟಿಸಬೇಕು. ನಿಯಮ ಪಾಲಿಸದವರ ಪಟ್ಟಿಯನ್ನು 30 ದಿನಗಳೊಳಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಸಲ್ಲಿಸಬೇಕು. ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಸಂಬಂಧಪಟ್ಟವರು ತಮ್ಮ ವಕೀಲ ವೃತ್ತಿಯ ಹಕ್ಕನ್ನು ಮರುಸ್ಥಾಪಿಸಲು ಅರ್ಜಿ ಸಲ್ಲಿಸಬಹುದು. ಈ ಆದೇಶದ ಅನುಷ್ಠಾನಕ್ಕೆ ಸಂಬಂಧಿಸಿದ ವರದಿಯನ್ನು ನ.30ರಂದು ಹೈಕೋರ್ಟ್ಗೆ ಸಲ್ಲಿಸಬೇಕಾಗಿದೆ ಎಂದು ರಾಜಣ್ಣ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.






