ಆರೆಸ್ಸೆಸ್ ನೋಂದಣಿ ದಾಖಲೆ ಸಾಬೀತುಪಡಿಸಲಿ : ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆ (Photo: PTI)
ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ವು ಅಧಿಕೃತವಾಗಿ ನೋಂದಣಿ ಮಾಡಿಕೊಂಡಿರುವ ಬಗ್ಗೆ ದಾಖಲೆ ಸಾಬೀತುಪಡಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಬುಧವಾರ ಸದಾಶಿವನಗರದ ನಿವಾಸದ ಬಳಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನಧಿಕೃತ ಸಂಘಟನೆಯಾಗಿರುವ ಆರೆಸ್ಸೆಸ್ಗೆ ಎಲ್ಲಿಂದ ಹಣ ಬರುತ್ತಿದೆ? ಬಟ್ಟೆಗಳ ಖರೀದಿ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ ಯಾರು ಹಣ ಕೊಡುತ್ತಿದ್ಧಾರೆ ಎಂಬುದನ್ನು ಬಹಿರಂಗಪಡಿಸಿ ಎಂದು ಹೇಳಿದರು.
ಆರೆಸ್ಸೆಸ್ ಸಂಘಟನೆ ನೋಂದಣಿ ಮಾಡಿಸಿಕೊಂಡಿರುವ ಕುರಿತು ದಾಖಲೆ ನೀಡಿದರೆ ಈ ಬಗ್ಗೆ ಪ್ರಶ್ನಿಸುವುದಿಲ್ಲ. ಕಾನೂನುಬದ್ಧವಾಗಿ ನೋಂದಣಿ ಮಾಡಿಸಿಕೊಂಡರೆ, ಸಂಘಟನೆಗೆ ಯಾರು ಹಣ ನೀಡುತ್ತಾರೆ. ಹೇಗೆ ಬರಲಿದೆ ಎಂಬುದನ್ನು ತಿಳಿಯಲಿದೆ. ಅಲ್ಲದೆ ತೆರಿಗೆ ವ್ಯಾಪ್ತಿಗೂ ಬರುವ ಕಾರಣದಿಂದಲೇ ಇದುವರೆಗೂ ಸಂಘಟನೆಯನ್ನು ನೋಂದಣಿ ಮಾಡಿಸಿಕೊಂಡಿಲ್ಲ ಎಂದು ಉಲ್ಲೇಖಿಸಿದರು.
ಚಿತ್ತಾಪುರ ಹಾಗೂ ಚಾಮರಾಜನಗರ ಸೇರಿದಂತೆ ರಾಜ್ಯದ ಇತರೆ ಕಡೆಗಳಲ್ಲಿ ಭೀಮ್ ಆರ್ಮಿ ಹಾಗೂ ದಲಿತ ಪ್ಯಾಂಥರ್ಸ್ ಸಂಘಟನೆಗಳು ಪಥ ಸಂಚಲನಕ್ಕೆ ಅನುಮತಿ ಕೇಳಿವೆ. ಹೈಕೋರ್ಟ್ ಆದೇಶದಂತೆ ವಾತಾವರಣ ಸುಗಮವಾಗಿದ್ದರೆ ಮಾಡಲಿ. ಇದು ಎಲ್ಲ ಸಂಘಟನೆಗಳಿಗೂ ಒಂದೇ ಮಾನದಂಡ ಅನ್ವಯವಾಗಲಿದೆ ಎಂದು ಸಚಿವರು ನುಡಿದರು.





