ಜೀತ ಪದ್ಧತಿ ತೊಡೆದು ಹಾಕಲು ಕೈಜೋಡಿಸಿ : ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು : ಜೀತ ಪದ್ಧತಿ ಆಚರಣೆ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಅಮಾನವೀಯ ಆಚರಣೆಯನ್ನು ಸಂಪೂರ್ಣ ತೊಡೆದು ಹಾಕಲು ಸರಕಾರದ ಜೊತೆ ಸಮಾಜವೂ ಕೈಜೋಡಿಸಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದ್ದಾರೆ.
ರವಿವಾರ ಜೀತ ಪದ್ಧತಿ ನಿರ್ಮೂಲನಾ ದಿನ ಆಚರಣೆ ಅಂಗವಾಗಿ ಈ ಬಗ್ಗೆ ಮಾಧ್ಯಮ ಪ್ರಕಟನೆ ಹೊರಡಿಸಿರುವ ಅವರು, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಮಟ್ಟದಲ್ಲಿ ಸಾರ್ವಜನಿಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜೀತ ಪದ್ದತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕು ಎಂದು ಕೋರಿದ್ದಾರೆ.
ಜೀತ ಪದ್ಧತಿ ಒಂದು ಅಮಾನುಷ ಕ್ರಿಯೆಯಾಗಿದ್ದು ಮನುಷ್ಯರು ನಾಚುವಂತಹ ಕೃತ್ಯವಾಗಿದೆ, ಜೀತ ಪದ್ಧತಿ ವಿರುದ್ಧ ಸರ್ಕಾರ ಬಿಗಿಯಾದ ಕ್ರಮಗಳನ್ನು ಕೈಗೊಂಡ ನಂತರ ಇಂತಹ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದರೂ ಸಹ ಈಗಲೂ ಇಂತಹ ಪ್ರಕರಣಗಳು ಅಪರೂಪಕ್ಕೆ ನಡೆಯುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜೀತ ಪದ್ಧತಿ ರದ್ಧತಿ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸಲಾಗಿದ್ದು, ಜೀತ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಜೀತ ವಿಮುಕ್ತರ ವಾಪಸ್ಸು, ಜೀತ ಕಾರ್ಮಿಕರಾಗದಂತೆ ತಡೆಗಟ್ಟಲು ಕೌಶಲ್ಯ ತರಬೇತಿ, ಸ್ವ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಸೇರಿದಂತೆ ಜೀತ ವಿಮುಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ
ಜೀತ ಕಾರ್ಮಿಕರ ಗುರುತಿಸುವಿಕೆ, ರಕ್ಷಣೆ, ಪುರ್ನವಸತಿ ಹಾಗೂ ಜೀತ ಅಪರಾಧಗಳಲ್ಲಿ ತೆಗೆದುಕೊಳ್ಳುವ ಕ್ರಮಗಳಿಗೆ ಸಂಬಂಧಿಸಿದಂತೆ ಮಾದರಿ ಕಾರ್ಯವಿಧಾನವನ್ನು ಹೊರತಂದಿದೆ. ಜೀತ ವಿಮುಕ್ತರಿಗೆ ತುರ್ತು ಪರಿಹಾರ ಅನುದಾನವಾಗಿ 30ಸಾವಿರ ರೂ.ಗಳನ್ನು ಜಿಲ್ಲಾಧಿಕಾರಿಗಳು ನೀಡುತ್ತಾರೆ. ಜೀತ ವಿಮುಕ್ತರ ಸಹಾಯಧನ ಯೋಜನೆಯಡಿ 2ಸಾವಿರ ರೂ.ಮಾಸಾಶನವನ್ನು ಜಿಲ್ಲಾ ಪಂಚಾಯತಿಗಳ ಮೂಲಕ ನೀಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.







