‘ಎಎಸ್‍ಸಿ’ ಕಮಾಂಡೆಂಟ್ ಆಗಿ ಲೆಫ್ಟಿನೆಂಟ್ ಜನರಲ್ ಅಜಯ್ ರಾಮ್‍ದೇವ್ ಅಧಿಕಾರ ಸ್ವೀಕಾರ

ಬೆಂಗಳೂರು : ಭಾರತೀಯ ಸೇನೆಯ ಆರ್ಮಿ ಸರ್ವಿಸ್ ಕಾಪ್ರ್ಸ್ (ಎಎಸ್‍ಸಿ) ಕೇಂದ್ರ ಮತ್ತು ಕಾಲೇಜಿನ ನೂತನ ಕಮಾಂಡೆಂಟ್ ಆಗಿ ಅಧಿಕಾರ ಸ್ವೀಕರಿಸಿದ ಲೆಫ್ಟಿನೆಂಟ್ ಜನರಲ್ ಅಜಯ್ ರಾಮ್‍ದೇವ್, ಎಎಸ್‍ಸಿ ಯುದ್ಧ ಸ್ಮಾರಕ ಹಾಗೂ ಪ್ರಾಣಿಗಳ ಸಾರಿಗೆ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು.
ತರಬೇತಿ ಮತ್ತು ನಾಯಕತ್ವ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಲೆಫ್ಟಿನೆಂಟ್ ಜನರಲ್ ಅಜಯ್ ರಾಮ್‍ದೇವ್, ಭಾರತೀಯ ಸಶಸ್ತ್ರ ಪಡೆಗಳ ಲಾಜಿಸ್ಟಿಕ್ಸ್ ಸಿಬ್ಬಂದಿಗೆ ತರಬೇತಿ ನೀಡುವ ಪ್ರಮುಖ ಸಂಸ್ಥೆಯಾದ ಎಎಸ್‍ಸಿ ಕೇಂದ್ರ ಮತ್ತು ಕಾಲೇಜಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಅವರು ಡೆಹ್ರಾಡೂನ್‍ನ ಪ್ರತಿಷ್ಠಿತ ರಾಷ್ತ್ರೀಯ ಇಂಡಿಯನ್ ಮಿಲಿಟರಿ ಕಾಲೇಜು, ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ಮಹೂವಿನ ಆರ್ಮಿ ವಾರ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಅಲ್ಲದೆ, ಆರ್ಮಿ ಸರ್ವಿಸ್ ಕಾಪ್ರ್ಸ್ ನ ಕರ್ನಲ್ ಕಮಾಂಡೆಂಟ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ವಿವಿಧ ಭೌಗೋಳಿಕ ಪ್ರದೇಶಗಳು ಹಾಗೂ ಬಹು ಆಯಾಮದ ಕಾರ್ಯಾಚರಣಾ ಪರಿಸರಗಳಲ್ಲಿ ಸೇನಾ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಸಂಪೂರ್ಣ ಲಾಜಿಸ್ಟಿಕ್ಸ್ ಬೆಂಬಲ ಒದಗಿಸುವ ಸಾಮರ್ಥ್ಯ ಹೊಂದಿರುವ ಸಿಬ್ಬಂದಿಯನ್ನು ರೂಪಿಸುವುದು ಅವರ ಪ್ರಮುಖ ಜವಾಬ್ದಾರಿಯಾಗಿದೆ.
ಬೆಂಗಳೂರಿನ ಎಎಸ್‍ಸಿ ಕೇಂದ್ರ ಮತ್ತು ಕಾಲೇಜು ಭಾರತೀಯ ಸೇನೆಯ ಆರ್ಮಿ ಸರ್ವಿಸ್ ಕಾಪ್ರ್ಸ್ ನ ಪ್ರಮುಖ ತರಬೇತಿ ಸಂಸ್ಥೆಯಾಗಿದ್ದು, ಶಾಂತಿ ಮತ್ತು ಯುದ್ಧದ ಸಂದರ್ಭಗಳಲ್ಲಿ ಸೇನೆಗೆ ಅಗತ್ಯವಿರುವ ಪೂರೈಕೆ, ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಬೆಂಬಲ ಒದಗಿಸುವ ಸಿಬ್ಬಂದಿಯನ್ನು ಸಿದ್ಧಪಡಿಸುತ್ತದೆ.
ಸಂಸ್ಥೆಯು ಡ್ರೋನ್ ತರಬೇತಿ ಮೂಲಸೌಕರ್ಯ ಅಭಿವೃದ್ಧಿ, ಸಮಗ್ರ ಲಾಜಿಸ್ಟಿಕ್ಸ್ ಕುರಿತ ವಿಶೇಷ ತರಬೇತಿ ಕೋರ್ಸ್‍ಗಳು ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಮುನ್ಸೂಚನಾ ಲಾಜಿಸ್ಟಿಕ್ಸ್ ನಂತಹ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ.






