ತಯಾರಿಕಾ ಘಟಕ ನಿರ್ಮಾಣಕ್ಕೆ ಲಿಂಡ್ ಕಂಪೆನಿ ಅಸಕ್ತಿ : ಎಂ.ಬಿ.ಪಾಟೀಲ್

ಬೆಂಗಳೂರು : ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಬಳಸುವ ಸ್ಪಟರಿಂಗ್ ಟಾರ್ಗೆಟ್ಸ್ ತಯಾರಿಕೆಗೆ ಹೆಸರಾಗಿರುವ ಅಮೆರಿಕ ಮೂಲದ ಲಿಂಡ್ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಟೆಕ್ನಾಲಜಿ ಕಂಪೆನಿಯು ರಾಜ್ಯದಲ್ಲಿ ತನ್ನದೇ ಆದ ತಯಾರಿಕಾ ಸ್ಥಾವರದ ಅಭಿವೃದ್ಧಿಗೆ ಬಂಡವಾಳ ಹೂಡಲು ಮುಂದೆ ಬಂದಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಕಂಪನಿಯ ಉನ್ನತ ಮಟ್ಟದ ನಿಯೋಗದ ಜತೆ ಹೂಡಿಕೆ ಮತ್ತು ಇದಕ್ಕೆ ಪೂರಕವಾದ ಸೌಕರ್ಯಗಳ ಬಗ್ಗೆ ಚರ್ಚಿಸಿದ ಬಳಿಕ ಅವರು ಮಾತನಾಡಿದರು.
ಲಿಂಡ್ ಕಂಪನಿಯು ಉತ್ತರ ಅಮೆರಿಕ, ಯೂರೋಪ್ ಮತ್ತು ಏಷ್ಯಾ ದ 12 ದೇಶಗಳ 35 ಕಡೆಗಳಲ್ಲಿ ತನ್ನ ಘಟಕಗಳನ್ನು ಹೊಂದಿದೆ. ಇದು ಎಲೆಕ್ಟ್ರಾನಿಕ್ ಮೆಟೀರಿಯಲ್ಸ್, ಸರ್ಫೇಸ್ ಎಂಜಿನಿಯರಿಂಗ್ ಮತ್ತು ಅಡ್ವಾನ್ಸ್ಡ್ ಕೋಟಿಂಗ್ ತಂತ್ರಜ್ಞಾನಗಳಲ್ಲಿ ಕೂಡ ಮುಂಚೂಣಿಯಲ್ಲಿದೆ. ಇಂತಹ ಕಂಪನಿಯ ಹೂಡಿಕೆಗೆ ನಮ್ಮ ಸ್ವಾಗತವಿದೆ ಎಂದು ಅವರು ಹೇಳಿದರು.
ಲಿಂಡ್ ಕಂಪನಿಯು ವಿಶೇಷವಾಗಿ ಹೈಪ್ಯೂರಿಟಿ ಮೆಟೀರಿಯಲ್ಸ್ ಮತ್ತು ಪಿವಿಡಿ (ಫಿಸಿಕಲ್ ವೇಪರ್ ಡಿಪೊಸಿಷನ್) ತಯಾರಿಕೆಗೆ ಹೆಸರುವಾಸಿಯಾಗಿದೆ. ಇದರಿಂದ ಸೆಮಿಕಂಡಕ್ಟರ್, ಏರೋಸ್ಪೇಸ್ ಮತ್ತು ಆಟೋಮೋಟಿವ್ ಉದ್ಯಮಗಳ ಪೂರೈಕೆ ಸರಪಳಿಯ ಬಲವರ್ಧನೆ ಆಗಲಿದೆ ಎಂದು ಅವರು ತಿಳಿಸಿದರು.
ಸ್ಥಳೀಯವಾಗಿಯೇ ಎಲ್ಲವೂ ತಯಾರಾಗಬೇಕು ಎನ್ನುವುದು ಸರಕಾರದ ಗುರಿಯಾಗಿದೆ. ಹೀಗಾಗಿ ಕಂಪನಿಗೆ ಬೇಕಾಗಿರುವ ಭೂಮಿ, ವಿದ್ಯುತ್ ಮತ್ತಿತರ ಮೂಲಸೌಕರ್ಯಗಳನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ಎಂ.ಬಿ.ಪಾಟೀಲ್ ವಿವರಿಸಿದರು. ಕಂಪನಿಯ ನಿಯೋಗದಲ್ಲಿ ಅಧ್ಯಕ್ಷ ಫ್ರಾಂಕ್ ಡಿ ಕರ್ಮಾನ್ಟ್ರೆಂಡ್, ಉಪಾಧ್ಯಕ್ಷ ಜಾನ್ ಸಿರ್ಮನ್, ಸಹನಿರ್ದೇಶಕರಾದ ಸಾಹಿರ್ ಖಾನ್, ಆದಿತ್ಯ ಬೋಡೇಪುಡಿ ಹಾಗೂ ಆದಿತ್ಯ ವಾಸನ್ ಸಿಂಗ್ಲಾ ಉಪಸ್ಥಿತರಿದ್ದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಖುಷ್ಬು ಗೋಯಲ್ ಸೇರಿದಂತೆ ಇತರರು ಸಭೆಯಲ್ಲಿ ಹಾಜರಿದ್ದರು.






