ಹಸನ್ ನಯೀಮ್ ಸುರಕೋಡರಿಗೆ ‘ಲೋಹಿಯಾ ಪ್ರಶಸ್ತಿ’

ಬೆಂಗಳೂರು : ಭಾರತ ಯಾತ್ರಾ ಕೇಂದ್ರವು ಪ್ರತಿವರ್ಷ ನೀಡುವ ಡಾ.ರಾಮಮನೋಹರ ಲೋಹಿಯಾ ಪ್ರಶಸ್ತಿಯನ್ನು ಈ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಮಾಜವಾದಿ ಚಿಂತಕ ಹಸನ್ ನಯೀಮ್ ಸುರಕೋಡ ಅವರಿಗೆ ನೀಡಲಾಗುತ್ತಿದೆ ಎಂದು ನಾಟಕ ಅಕಾಡಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ತಿಳಿಸಿದ್ದಾರೆ.
ಬುಧವಾರ ಈ ಕುರಿತು ಪ್ರಕಟನೆ ನೀಡಿದ ಅವರು, ಡಾ.ರಾಮಮನೋಹರ ಲೋಹಿಯಾ ಅವರ ಜನ್ಮದಿನಾಚರಣೆ ಅಂಗವಾಗಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಮಾ.22ರಂದು ಸಂಜೆ 4ಗಂಟೆಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು ತಾಮ್ರದ ಫಲಕವನ್ನು ಹೊಂದಿರುತ್ತದೆ. ಸಾಹಿತಿ ಡಾ.ಕಾಳೇಗೌಡ ನಾಗವಾರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಡಾ.ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ನ ಅಧ್ಯಕ್ಷೆ ಸುಮಾ ವಿಜಯ್, ಕರ್ನಾಟಕ ನಾಟಕ ಅಕಾಡಮಿಯ ಸದಸ್ಯೆ ಗಾಯಿತ್ರಿ ಹಡಪದ್ ಅವರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದ್ದಾರೆ.






