ಎಂ.ಕೆ.ಜಗದೀಶ್ ಸೇರಿ ಮೂವರು ಅಧಿಕಾರಿಗಳಿಗೆ ಸೇರಿದ 7 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ

ಬೆಂಗಳೂರು : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.) ಎಂ.ಕೆ.ಜಗದೀಶ್ ಸೇರಿದಂತೆ ಮೂವರು ಅಧಿಕಾರಿಗಳ ಕಚೇರಿ, ಯಲಹಂಕ ಹಾಗೂ ದೇವನಹಳ್ಳಿಯ ತಹಶೀಲ್ದಾರ್ ಕಚೇರಿ, 4 ಮನೆಗಳು ಸೇರಿದಂತೆ 7 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಇಲ್ಲಿನ ಕಾವೇರಿ ಭವನದಲ್ಲಿರುವ ಜಗದೀಶ್ ಅವರ ಕಚೇರಿ, ನಿವಾಸ, ಯಲಹಂಕ, ದೇವನಹಳ್ಳಿಯ ತಹಶೀಲ್ದಾರ್ ಕಚೇರಿ ಸೇರಿದಂತೆ ಒಟ್ಟು 7 ಕಡೆಗಳಲ್ಲಿ ದಾಳಿ ನಡೆಸಿ ಶೋಧ ನಡೆಸಲಾಗಿದೆ. ಈ ಹಿಂದೆ ಅವರು ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿದ್ದಾಗ, 2020ರಲ್ಲಿ ಯಲಹಂಕ ಸಮೀಪದ ಹುಣಸಮಾರನಹಳ್ಳಿಯಲ್ಲಿರುವ 16 ಎಕರೆ ಸರಕಾರಿ ಜಮೀನನ್ನು 9 ಜನ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವ ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಜಗದೀಶ್ ಅವರ ಕಚೇರಿ ಮತ್ತು ಮನೆಗಳು, ಅಂದಿನ ತಹಶೀಲ್ದಾರ್ ಮಂಜುನಾಥ್ ಅವರ ಮನೆ, ಶಿರಸ್ತೇದಾರ್ ರಜನಿಕಾಂತ್ ರೆಡ್ಡಿಯವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ಮಾತನಾಡಿ, ಜಮೀನು ಮಂಜೂರಾತಿಗೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ 9 ಜನ ಖಾಸಗಿ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗಿದ್ದು, ವಶಪಡಿಸಿಕೊಂಡ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಫಲಾನುಭವಿಗಳಿಗೆ ಹಾಗೂ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳಿಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.






