8 ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ: 29.61 ಕೋಟಿ ರೂ. ಮೌಲ್ಯದ ಆಸ್ತಿ, 80 ಮದ್ಯದ ಬಾಟಲಿ ಪತ್ತೆ

ಬೆಂಗಳೂರು : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಬೆಂಗಳೂರು, ಮಂಡ್ಯ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿರುವ ಎಂಟು ಮಂದಿ ಸರಕಾರಿ ಅಧಿಕಾರಿಗಳ ನಿವಾಸಗಳು ಸೇರಿ 33 ಕಡೆಗಳಲ್ಲಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಅಧಿಕಾರಿಗಳ ಬಳಿ ಅಕ್ರಮವಾಗಿ ಸಂಪಾದಿಸಿದ್ದ ನಗದು, ಚಿನ್ನಾಭರಣ, ಆಸ್ತಿ ದಾಖಲೆಗಳು, 80 ಮದ್ಯದ ಬಾಟಲಿಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಸೇರಿ 29.61 ಕೋಟಿ ರೂ. ಆಸ್ತಿಯನ್ನು ಪತ್ತೆ ಮಾಡಿದ್ದಾರೆ.
ಮಂಡ್ಯದ ಹಿಂದುಳಿದ ವರ್ಗಗಳ ಕಲ್ಯಾಣ (ಬಿಸಿಎಂ) ಹಾಸ್ಟೆಲ್‌ನ ನಿವೃತ್ತ ಸೂಪರಿಂಟೆಂಡೆಂಟ್ ಶಿವರಾಜು ಅವರ ಮದ್ದೂರಿನ ವಿನಾಯಕ ಲೇಔಟ್‌ನಲ್ಲಿರುವ ನಿವಾಸ ಮತ್ತು ಅವರ ತೋಟದ ಮನೆಯಲ್ಲಿ ಶೋಧ ನಡೆಸಲಾಗಿದೆ. ಅವರ ಬಳಿ ನಗದು, ಚಿನ್ನಾಭರಣಗಳು, ಆಸ್ತಿ ದಾಖಲೆಗಳು ಮತ್ತು ದುಬಾರಿ ರೇಷ್ಮೆ ಸೀರೆಗಳ ಜೊತೆಗೆ 2 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ, ಅವರ ನಿವಾಸದಿಂದ ಸುಮಾರು 80 ಬಾಟಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಇನ್ನು ಎರಡು ವರ್ಷಗಳ ಹಿಂದೆ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ವಿಐಪಿಗಳಿಗೆ ವಿತರಿಸಲು ತಂದಿದ್ದ ಉಡುಗೊರೆ ಪೆಟ್ಟಿಗೆಗಳು ಸಹ ಅವರ ನಿವಾಸ ಮತ್ತು ತೋಟದ ಮನೆಯಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.
ಕಲಬುರಗಿಯ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆದ ರಾಜೇಶ್ವರಿ ನಿವಾಸದಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶೋಧದ ಸಮಯದಲ್ಲಿ ಸುಮಾರು 400 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಹಾಗೆಯೇ ಅಧಿಕಾರಿಯ ಆಸ್ತಿ ಮತ್ತು ಹಣಕಾಸು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಅವರ ಬಳಿ 1.91 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿರುವ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಿರಣ್ ಕುಮಾರ್ ಅವರ ಕುಟುಂಬಕ್ಕೆ ಸಂಬಂಧಿಸಿದ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಹುಬ್ಬಳ್ಳಿಯಲ್ಲಿರುವ ಹೆಸ್ಕಾಂ ಕಚೇರಿ, ಎಇಇ ಅವರ ಪತ್ನಿಯ ನಿವಾಸ ಮತ್ತು ಕಚೇರಿ, ಹುಬ್ಬಳ್ಳಿಯ ಅಕ್ಷಯ್ ಪಾರ್ಕ್‌ನಲ್ಲಿರುವ ಮನೆ ಮತ್ತು ಧಾರವಾಡದಲ್ಲಿರುವ ಅಧಿಕಾರಿಯ ಸಹೋದರನಿಗೆ ಸೇರಿದ ಆಸ್ತಿಯನ್ನು ಶೋಧಿಸಲಾಗಿದೆ. ಅವರ ಬಳಿ 1.79 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ.
ಇನ್ನು ಜಿಬಿಎನ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಂಗನಾಥ್ ಎಚ್.ಎಂ ಬಳಿ 3.80 ಕೋಟಿ ರೂ., ಬೆಂಗಳೂರಿನ ನೋಂದಣಿ ಅಧಿಕಾರಿ ಶ್ರೀದೇವಿ ಬಳಿ 6.80 ಕೋಟಿ ರೂ., ಮಡಿಕೇರಿಯ ನಗರಸಭೆಯ ಪೌರಾಯುಕ್ತರಾದ ಎಚ್.ಆರ್. ರಮೇಶ್ ಬಳಿ 1.78 ಕೋಟಿ ರೂ., ಬೀದರ್‌ನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಾಣಿಕ್ ರಾವ್ ಬಳಿ 2.51 ಕೋಟಿ ರೂ., ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ದರ್ಶನ್ ಗೌಡ ಬಳಿ 1.86 ಕೋಟಿ ರೂ. ಅಕ್ರಮ ಆಸ್ತಿ ಪತ್ತೆಯಾಗಿದೆ.






