ಲೂಟಿ ಮಾಡಿದ ಹಣ ರಾಹುಲ್ ಗಾಂಧಿಯವರ ಮನೆಗೆ: ಶ್ರೀರಾಮುಲು ಆರೋಪ

ಬೆಂಗಳೂರು: ವಾಲ್ಮೀಕಿ ನಿಗಮದ ಲೂಟಿ ಮಾಡಿದ ಹಣ ರಾಹುಲ್ ಗಾಂಧಿಯವರ ಮನೆಗೆ ಹೋಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣ ದುರುಪಯೋಗ ಆಗಿ ರಾಹುಲ್ ಗಾಂಧಿ ಮನೆಗೆ ಹೋಗಿದೆ ಎಂದು ಘೋಷಣೆಗಳನ್ನು ಸದನದಲ್ಲಿ ನಮ್ಮ ನಾಯಕರು ಕೂಗಿದ್ದಾರೆ. ಇದು ರಾಹುಲ್ ಗಾಂಧಿಯವರಿಗೆ ಗೊತ್ತಾಗಿದೆ. ಬಳಿಕ ಅವರ ಸೂಚನೆಯಂತೆ ಡಿ.ಕೆ.ಶಿವಕುಮಾರ್ ಸದನವನ್ನು ಮೊಟಕುಗೊಳಿಸಿ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ ಎಂದು ದೂರಿದರು.
ಸೆಪ್ಟೆಂಬರ್ 1 ರಿಂದ ನಮ್ಮ ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ಜನಾರ್ದನ ರೆಡ್ಡಿ, ಆರ್.ಅಶೋಕ್, ಬಂಗಾರು ಹನುಮಂತು, ಪಕ್ಷದ ಮುಖಂಡರು ಪಾದಯಾತ್ರೆ ಶುರು ಮಾಡಲು ನಿರ್ಧರಿಸಿದ್ದಾರೆ. 10ರಂದು ಬಳ್ಳಾರಿಯಲ್ಲಿ ಅದು ಮುಕ್ತಾಯವಾಗಲಿದೆ ಎಂದು ವಿವರಿಸಿದರು.
ದಲಿತರ ಹಣವನ್ನು ದುರುಪಯೋಗ ಮಾಡಿದರೆ ಯಾರಿಗೂ ಗೊತ್ತಾಗದು ಎಂದು ಕಾಂಗ್ರೆಸ್ ನಾಯಕರು ತಿಳಿದುಕೊಂಡಿದ್ದರು. ನೀರಾವರಿ ವಿಚಾರದಲ್ಲಿ ನಿರ್ಲಕ್ಷ್ಯ, ಎಸ್ಟಿ ನಿಗಮದಲ್ಲಿ ಭ್ರಷ್ಟಾಚಾರ, ವಾಲ್ಮೀಕಿ ನಿಗಮದ ವಿಷಯವನ್ನೂ ಒಳಗೊಂಡು ಪಾದಯಾತ್ರೆ ನಡೆಯಲಿದೆ. ದಲಿತರೆಂದರೆ ಕಾಂಗ್ರೆಸ್ ಪಕ್ಷ ನಿರ್ಲಕ್ಷ್ಯ ವಹಿಸುತ್ತಿದೆ. ದಲಿತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಈ ದೊಡ್ಡ ಪಾದಯಾತ್ರೆ ನಡೆಸಲಿದೆ ಎಂದು ತಿಳಿಸಿದರು.
ದಲಿತರ ಬಗ್ಗೆ ಕಾಂಗ್ರೆಸ್ ನಾಯಕರ ಮೊಸಳೆಕಣ್ಣೀರು
ಕಾಂಗ್ರೆಸ್ ನಾಯಕರು ದಲಿತರ ಬಗ್ಗೆ ಮೊಸಳೆಕಣ್ಣೀರು ಹಾಕುತ್ತಾರೆ. ಬಿಜೆಪಿ ಹೋರಾಟ ಗಮನಿಸಿ ಸದನವನ್ನು ಮೊಟಕುಗೊಳಿಸಿದ್ದಾರೆ ಎಂದು ಆಕ್ಷೇಪಿಸಿದರು. ಮೇಲ್ಮನೆ, ಕೆಳಮನೆಯಲ್ಲಿ ಹೋರಾಟ ನಡೆದಿತ್ತು ಎಂದರು. ಇವರು ಬಾಬಾ ಸಾಹೇಬ ಅಂಬೇಡ್ಕರರಿಗೆ, ಬಾಬು ಜಗಜೀವನರಾಂ ಅವರಿಗೆ ಹಾಗೂ ದಲಿತರಿಗೆ ಮೋಸ ಮಾಡಿದವರು ಎಂದು ಆರೋಪಿಸಿದರು.






