ಬೆಂಗಳೂರು ಕೌಶಲ್ಯ ಶೃಂಗಸಭೆ-2026ಕ್ಕೆ ಚಾಲನೆ
33 ಜಿಟಿಟಿಸಿ ಮೂಲಕ ಆಧುನಿಕ ಕೌಶಲ್ಯ ತರಬೇತಿ: ಎಂ.ಬಿ.ಪಾಟೀಲ್

ಬೆಂಗಳೂರು :ಕೌಶಲ್ಯಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ರಂಗದ ಬೇಡಿಕೆಗಳನ್ನು ಪೂರೈಸಲು ರಾಜ್ಯದ 33 ಸರಕಾರಿ ಜಿಟಿಟಿಸಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಿಸಿಷನ್ ಟಾಯ್ಲಿಂಗ್, ಸಿಎನ್ ಸಿ ಮತ್ತು ಮೆಕೆನ್ಟ್ರಾನಿಕ್ಸ್ ವಿಭಾಗಗಳಲ್ಲಿ ಸಂಪೂರ್ಣ ತರಬೇತಿ ಕೊಡಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ರಾಜ್ಯ ಸರಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿರುವ ‘ಬೆಂಗಳೂರು ಕೌಶಲ್ಯ ಶೃಂಗಸಭೆ-2026’ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಗ್ರ ಕೈಗಾರಿಕಾ ಬೆಳವಣಿಗೆಯ ದೂರದೃಷ್ಟಿಯಿಂದ ಸಾಂಪ್ರದಾಯಿಕ ತಯಾರಿಕೆಯ ವಿಧಾನದಿಂದ ಬೌದ್ಧಿಕ ಆಸ್ತಿಗಳ ನಿರ್ಮಾಣ, ಡೀಪ್-ಟೆಕ್ ಸಂಶೋಧನೆ, ಪ್ರಿಸಿಷನ್ ಇಂಜಿನಿಯರಿಂಗ್ ಮತ್ತು ಜಾಗತಿಕ ಮಟ್ಟದ ಸಂಶೋಧನೆ ಹಾಗೂ ಅಭಿವೃದ್ಧಿ ಪರಿವ್ಯವಸ್ಥೆಯ ಕಡೆಗೆ ಹೊರಳಿಕೊಳ್ಳುತ್ತಿದ್ದೇವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಸರಕಾರವು ಕೌಶಲ್ಯಾಭಿವೃದ್ಧಿ ಒದಗಿಸಲೆಂದೇ ‘ನಿಪುಣ ಕರ್ನಾಟಕ’ ಯೋಜನೆಯನ್ನು ಜಾರಿಗೆ ತಂದಿದೆ. ಕೈಗಾರಿಕೆಗಳು ಕೂಡ ಸರಕಾರದ ಉಪಕ್ರಮವಾಗಿರುವ ಕೈಗಾರಿಕಾ ಸಂಪರ್ಕ ಘಟಕದ ಜತೆ ನಿಕಟವಾಗಬೇಕು ಎಂದು ಎಂ.ಬಿ.ಪಾಟೀಲ್ ನುಡಿದರು.
ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗೃಹ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಝ್ವಾನ್ ಅರ್ದ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ(ಕಾಂತಾ)ನಾಯ್ಕ್, ಮುಂತಾದವರು ಉಪಸ್ಥಿತರಿದ್ದರು.
ರಾಜ್ಯದಲ್ಲಿರುವ 1,000ಕ್ಕೂ ಹೆಚ್ಚು ಜಿಸಿಸಿ ಕೇಂದ್ರಗಳು ಮತ್ತು 750 ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೌಶಲ್ಯವನ್ನು ಹೊಂದಿರುವ 12 ಲಕ್ಷ ಜನರು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ 31 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. 2030ರೊಳಗೆ 7.5 ಲಕ್ಷ ಕೋಟಿ ರೂ. ಬಂಡವಾಳ ಸೆಳೆದು, 20 ಲಕ್ಷ ಉದ್ಯೋಗ ಸೃಷ್ಟಿಸುವ ಮತ್ತು 2032ರ ಹೊತ್ತಿಗೆ ರಾಜ್ಯವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಸುವ ಗುರಿ ನಮ್ಮದಾಗಿದೆ. ಈ ಪೈಕಿ ಈಗಾಗಲೇ ಶೇ.75ರಷ್ಟು ಹೂಡಿಕೆ ಪ್ರಸ್ತಾವಗಳು ನೈಜವಾಗಿ ಬಂದಿವೆ.
-ಎಂ.ಬಿ.ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ






