ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಗುರಿ ಮೀರಿ ಸಾಧನೆ: ಎಂ.ಬಿ.ಪಾಟೀಲ್

ಬೆಂಗಳೂರು : ಹಿಂದಿನ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ನಾವು ದೊಡ್ಡ ಗುರಿಯನ್ನು ಹೊಂದಿದ್ದೆವು. ಆದರೆ, ಆ ಗುರಿಯನ್ನೂ ಮೀರಿ ಸಾಧನೆ ಮಾಡಿದ್ದೇವೆ. ಹೂಡಿಕೆದಾರರು ಕರ್ನಾಟಕದ ಮೇಲೆ ವಿಶ್ವಾಸವಿಟ್ಟು ಸುಮಾರು 10.27 ಲಕ್ಷ ಕೋಟಿ ರೂ. ಹೂಡಿಕೆ ಮಾಡುವ ಬದ್ಧತೆ ವ್ಯಕ್ತಪಡಿಸಿದ್ದರು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ‘ಜಾಗತಿಕ ಹುಡಿಕೆದಾರರ ಸಮಾವೇಶ-2027’ರ ಪೂರ್ವಭಾವಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಪಾಲಿಗೆ ಹೂಡಿಕೆದಾರರ ಸಮಾವೇಶದ ನಿಜವಾದ ಯಶಸ್ಸು ತಿಳಿಯುವುದು ಒಪ್ಪಂದಗಳಿಗೆ ಸಹಿ ಹಾಕಿದ ದಿನವಲ್ಲ. ಕಾರ್ಖಾನೆಗಳು ಕಾರ್ಯಾರಂಭ ಮಾಡುವ ದಿನ ಎಂದರು.
ಕರ್ನಾಟಕದಾದ್ಯಂತ ಅಂದು ವ್ಯಕ್ತಪಡಿಸಿದ ಹೂಡಿಕೆ ಬದ್ಧತೆಗಳು ಈಗ ಭೂಮಿ ಹಂಚಿಕೆ, ಅನುಮೋದನೆ ಮತ್ತು ನಿರ್ಮಾಣ ಹಂತದಲ್ಲಿರುವ ಕೈಗಾರಿಕಾ ಘಟಕಗಳ ರೂಪ ಪಡೆಯುತ್ತಿವೆ. ಈಗಾಗಲೇ ಉತ್ಪಾದನಾ ವಲಯದ ಸುಮಾರು ಶೇ.65ರಷ್ಟು ಹೂಡಿಕೆಗಳು ಕಾರ್ಯರೂಪಕ್ಕೆ ಬಂದಿವೆ ಎಂದು ಅವರು ಹೇಳಿದರು.
ವೆಂಚುರೈಸ್‍ನ ಮೂರನೇ ಆವೃತ್ತಿ ಹಾಗೂ ಕೆಐಎಡಿಬಿ ಡಿಜಿಟಲ್ ಕೈಗಾರಿಕಾ ಭೂ ಬ್ಯಾಂಕ್‍ಗೆ ಚಾಲನೆ ನೀಡಿದ್ದೇವೆ. ಇವೆರಡೂ ವಿಭಿನ್ನ ಉದ್ದೇಶಗಳನ್ನು ಹೊಂದಿದ್ದರೂ, ಒಂದಕ್ಕೊಂದು ಪೂರಕವಾಗಿವೆ. ಒಂದು ನಾಳಿನ ಉದ್ಯಮಗಳನ್ನು ರೂಪಿಸುವುದರ ಬಗ್ಗೆ ಗಮನಹರಿಸಿದರೆ, ಮತ್ತೊಂದು ಇಂದೇ ಆ ಉದ್ಯಮಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ ಎಂದು ಅವರು ತಿಳಿಸಿದರು.
ಮಹತ್ವಾಕಾಂಕ್ಷೆಗೆ ಕಾರ್ಯರೂಪದ ಬೆಂಬಲ ನೀಡುವುದೇ ಜಾಗತಿಕ ಹೂಡಿಕೆದಾರರ ಸಮಾವೇಶ-2027ರ ಆಶಯ ಎಂಬುದನ್ನು ಈ ಎರಡೂ ಉಪಕ್ರಮಗಳು ಸಾರುತ್ತವೆ. ಕಂಪನಿಗಳಾದ ಡಿಎನ್ ಸೊಲುಷನ್ಸ್, ಕ್ರೋನ್ಸ್, ನಿಡೆಕ್ ಮತ್ತು ಫಾಕ್ಸ್‍ಕಾನ್‍ಗಳ ಹೂಡಿಕೆಗಳು ದಾಖಲೆ ಅವಧಿಯಲ್ಲಿ ಕಾರ್ಯಾರಂಭ ಮಾಡಿವೆ. ಲ್ಯಾಮ್ ರಿಸರ್ಚ್, ಅಪ್ಲೈಡ್ ಮಟೇರಿಯಲ್ಸ್, ಎಂವೀ, ವಿಪ್ರೊ ಎಲೆಕ್ಟ್ರಾನಿಕ್ ಮಟೇರಿಯಲ್ಸ್, ಜಿಂದಾಲ್ ಅಲ್ಯುಮಿನಿಯಂ ಮತ್ತು ಮಹೀಂದ್ರಾ ಏರೊಸ್ಪೇಸ್-ನ ಪ್ರಮುಖ ಯೋಜನೆಗಳು ಪ್ರಗತಿ ಹಂತದಲ್ಲಿ ಇವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿನ ಹೂಡಿಕೆಗಳು ರಾಜ್ಯದ ಯಾವ ಭಾಗಗಳಿಗೆ ತಲುಪುತ್ತಿವೆ ಎಂಬುದೂ ಅಷ್ಟೇ ಮುಖ್ಯ. ಕಲಬುರಗಿ ಮತ್ತು ಕೊಪ್ಪಳದಿಂದ ಬೆಳಗಾವಿ, ಕೋಲಾರ ಹಾಗೂ ತುಮಕೂರಿನವರೆಗೆ ರಾಜ್ಯದ ಎಲ್ಲ ಪ್ರದೇಶಗಳಿಗೂ ಹೂಡಿಕೆಗಳು ಹರಿದುಬರುತ್ತಿವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್, ವಿದ್ಯುತ್ ಚಾಲಿತ ವಾಹನಗಳು, ಉಕ್ಕು, ಸಿಮೆಂಟ್, ನವೀಕರಿಸಬಹುದಾದ ಇಂಧನ ಮತ್ತು ಜೀವ ವಿಜ್ಞಾನ ಸೇರಿದಂತೆ ಹಲವು ವಲಯಗಳು ಏಕಕಾಲದಲ್ಲಿ ಬೆಳವಣಿಗೆ ಕಾಣುತ್ತಿವೆ. ಈ ಸಮಾರಂಭವು ಈ ಎಲ್ಲ ಸಾಧನೆಗಳನ್ನೂ, ಹೂಡಿಕೆಯ ಭರವಸೆಯನ್ನು ಯೋಜನೆಗಳಾಗಿ ಪರಿವರ್ತಿಸಿದ ಪ್ರತಿಯೊಂದು ಕಂಪನಿಯ ಕೊಡುಗೆಯನ್ನೂ ಸಂಭ್ರಮಿಸುವ ಸಂದರ್ಭ ಇದಾಗಿದೆ ಎಂದು ಅವರು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಹೊಸ ಹೆಜ್ಜೆ: ಜಾಗತಿ ಹೂಡಿಕೆದಾರರ ಸಮಾವೇಶ- 2027 ಅನ್ನು ನಿಜವಾದ ಅರ್ಥದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನಾಗಿ ರೂಪಿಸುವುದು ನಮ್ಮ ಸ್ಪಷ್ಟ ಗುರಿಯಾಗಿದೆ. ಇದಕ್ಕಾಗಿ ಮುಂಬರುವ ತಿಂಗಳುಗಳಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಹೂಡಿಕೆದಾರರು ಇರುವ ಸ್ಥಳಗಳಿಗೇ ಕರ್ನಾಟಕದ ಅವಕಾಶಗಳನ್ನು ಕೊಂಡೊಯ್ಯಲಿದ್ದೇವೆ ಎಂದು ಅವರು ಹೇಳಿದರು.
ರಾಜ್ಯದ ಎಲ್ಲ ಭಾಗಗಳಿಗೂ ಅಭಿವೃದ್ಧಿಯ ಫಲ ತಲುಪಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಮುಂಬರುವ ತಿಂಗಳುಗಳಲ್ಲಿ ಉತ್ತರ ಕರ್ನಾಟಕದಲ್ಲಿ ವಿಶೇಷ ಹೂಡಿಕೆದಾರರ ಸಮಾವೇಶ ಆಯೋಜಿಸಲಿದ್ದೇವೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಹೂಡಿಕೆ ಅವಕಾಶಗಳನ್ನು ನೇರವಾಗಿ ಹೂಡಿಕೆದಾರರ ಮುಂದಿಡುವುದು ಇದರ ಉದ್ದೇಶ. ಈ ಪ್ರದೇಶವು ಹಿಂದೆಂದೂ ಕಾಣದ ಪ್ರಮಾಣದಲ್ಲಿ ಹೂಡಿಕೆಯನ್ನು ಆಕರ್ಷಿಸಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಸಮಾರಂಭದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ರಿಝ್ವಾನ್ ಅರ್ಶದ್, ನರೇಂದ್ರಸ್ವಾಮಿ, ಬಸವರಾಜ ರಾಯರೆಡ್ಡಿ, ಬಸವಂತಪ್ಪ, ಡಾ.ಅಜಯ್ ಸಿಂಗ್, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ಮಾಜಿ ಸಚಿವ ಆರ್. ವಿ. ದೇಶಪಾಂಡೆ, ಡಾ.ದೇವಿ ಶೆಟ್ಟಿ, ವಿವಿಧ ದೇಶಗಳ ಕಾನ್ಸುಲ್ ಜನರಲ್, ಉದ್ಯಮ ಪ್ರಮುಖರು, ವಾಣಿಜ್ಯೋದ್ಯಮ ಸಂಘಟನೆಗಳ ಪದಾಧಿಕಾರಿಗಳು, ಸರಕಾರದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಸ್ವಾಗತಿಸಿದರು. ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಖುಷ್ಬೂ ಜಿ. ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು.






