ಹಿಂದೂಗಳಂತೆ ಮುಸ್ಲಿಮ್, ಪಾರ್ಸಿ, ಸಿಖ್ಖರು ಈ ದೇಶದ ನಾಗರಿಕರು, ತುಷ್ಟೀಕರಣದ ಅವಶ್ಯಕತೆಯಿಲ್ಲ : ಎಂ.ವೀರಪ್ಪ ಮೊಯ್ಲಿ

ಬೆಂಗಳೂರು : ಹಿಂದೂಗಳಂತೆ ಮುಸ್ಲಿಮ್, ಪಾರ್ಸಿ, ಸಿಖ್ಖರೂ ಕೂಡ ಈ ದೇಶದ ನಾಗರಿಕರು. ಹೀಗಿರುವಾಗ ಯಾವ ಸಮುದಾಯವನ್ನು ತುಷ್ಟೀಕರಣ ಮಾಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಶನಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಲೇಖಕ ಡಾ.ಎಸ್.ಗುರುಮೂರ್ತಿ ಅವರ ‘ಭಾರತೀಯ ಮುಸ್ಲಿಂ ವೀರಯೋಧರ ವೀರಗಾಥೆಗಳು’ ಪುಸ್ತಕವನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ದೇಶದ ಜನರು ನಮ್ಮವರು ಅಂದುಕೊಂಡರೆ ಯಾವ ಸಮಸ್ಯೆ ಬರುವುದಿಲ್ಲ. ಇಂಡೊನೇಷ್ಯಾ ಹೊರತುಪಡಿಸಿದರೆ ಅತಿ ಹೆಚ್ಚು ಮುಸ್ಲಿಮರು ಇರುವುದು ಭಾರತದಲ್ಲಿ. ಇವರು ನಮ್ಮ ದೇಶದಲ್ಲಿಯೇ ಹುಟ್ಟಿರುವುದು. ಕೆಲವರು ತುಷ್ಟೀಕರಣದ ಕುರಿತು ಮಾತನಾಡುತ್ತಿದ್ದಾರೆ. ಜ್ಞಾನವಿಲ್ಲದ ಜನರು ದೇಶ ಆಳುತ್ತಿದ್ದಾರೆ ಮತ್ತು ಈ ರೀತಿಯ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದು ವೀರಪ್ಪ ಮೊಯ್ಲಿ ಬೇಸರ ವ್ಯಕ್ತಪಡಿಸಿದರು.
‘ಸಂಸ್ಕೃತಿ ಅಂದರೆ ಕೇವಲ ಹಿಂದೂ ಮತ್ತು ಮುಸ್ಲಿಮ್ ಸಂಸ್ಕೃತಿ ಅಲ್ಲ. ನಾವು ಬದುಕಿ ಮತ್ತೊಬ್ಬರನ್ನು ಬದುಕಲು ಬಿಡಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಆಚರಣೆ ಮಾಡಿದ್ದೆವು. ಆಗ ಯಾವುದೇ ಪ್ರತಿಭಟನೆ ಮಾಡಿರಲಿಲ್ಲ. ನಂತರ ವಿವಾದ ಶುರು ಮಾಡಿದ್ದಾರೆ’ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
‘ಟಿಪ್ಪು ದೇಶಕ್ಕಾಗಿ ತನ್ನ ಮಕ್ಕಳನ್ನು ಬ್ರಿಟಿಷರಿಗೆ ಅಡವಿಟ್ಟ. ದೇಶದ ಇತಿಹಾಸ ತಿಳಿದುಕೊಳ್ಳಬೇಕು. ದೇಶದ ಸಂಸ್ಕೃತಿ, ಪ್ರಜಾಪ್ರಭುತ್ವದ ಮೌಲ್ಯ ತಿಳಿದುಕೊಳ್ಳದ ಹೊರತು ಕೋಮು ಗಲಭೆಗಳು, ಹತ್ಯಾಕಾಂಡಗಳು ನಿಲ್ಲುವುದಿಲ್ಲ’ ಎಂದು ವೀರಪ್ಪ ಮೊಯ್ಲಿ ಹೇಳಿದರು.
ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಮಾತನಾಡಿ, ‘ಭಾಷೆಗೂ ಜಾತಿ ಕಟ್ಟುತ್ತಿದ್ದಾರೆ. ಉರ್ದು ಮಾತನಾಡಿದರೆ ಮುಸ್ಲಿಮ್, ಪ್ರಾಕೃತ ಮಾತನಾಡಿದರೆ ಜೈನರು. ಇಂತಹ ಸಂದರ್ಭದಲ್ಲಿ ಮನಸ್ಸು ಪರಿವರ್ತನೆ ಆಗುವಂತಹ ಪುಸ್ತಕವನ್ನು ಗುರುಮೂರ್ತಿ ಅವರು ಬರೆದಿದ್ದಾರೆ’ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ರಿಝ್ವಾನ್ ಅರ್ಶದ್, ಸಾಹಿತಿ ಪ್ರೊ.ಜಿ.ಅಶ್ವತ್ಥ ನಾರಾಯಣ, ಲೇಖಕರಾದ ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷಾ, ಡಾ.ಷಾಕಿರಾ ಖಾನಂ, ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಮುಹಮ್ಮದ್ ರಫಿ ಪಾಷಾ, ಪ್ರಾಧ್ಯಾಪಕ ಡಾ.ಮುಹಮ್ಮದ್ ಫಾರೂಕ್ ಪಾಷಾ ಉಪಸ್ಥಿತರಿದ್ದರು.







