ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ರಾಜ್ಯದ ಮಾದರಿ ಶಾಲೆಗಳನ್ನಾಗಿ ರೂಪಿಸಲಾಗುವುದು : ಮಧುಬಂಗಾರಪ್ಪ
ಶಿಕ್ಷಕರ ಬಳಿ ತೆರಳಿ, ಸರಕಾರಿ ಶಾಲೆಯಲ್ಲೇ ಶಿಕ್ಷಕರ ದಿನಾಚರಣೆ ಆಚರಿಸಿದ ಸಚಿವ

ಬೆಂಗಳೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಕರ ದಿನಾಚರಣೆ ಅಂಗವಾಗಿ ನಗರದ ಸರಕಾರಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ, ಶಿಕ್ಷಕರಿಗೆ ಶುಭ ಕೋರುವ ಮೂಲಕ ಶಿಕ್ಷಕ ವೃಂದದವರ ಖುಷಿಗೆ ಕಾರಣರಾದರು.
ಮೊದಲಿಗೆ ಬೆಂಗಳೂರಿನ ತಣಿಸಂದ್ರದಲ್ಲಿರುವ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ಅಲ್ಲಿನ ಶಿಕ್ಷಕರೊಂದಿಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.
ಸಚಿವರು ಶಾಲೆಗೆ ಆಗಮಿಸಿ ಶಿಕ್ಷಕರೊಂದಿಗೆ ಶಿಕ್ಷಕರ ದಿನಾಚರಣೆ ಆಚರಿಸಿದ್ದಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ವೀಣಾ ಸಂತಸ ವ್ಯಕ್ತಪಡಿಸಿದರು. “ಇದು ನಮಗೆ ಸಿಕ್ಕಿರುವ ಸುವರ್ಣಾವಕಾಶ. ಸಚಿವರು ನಮ್ಮ ಶಾಲೆಗೆ ಆಗಮಿಸಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಜಕ್ಕೂ ಖುಷಿಯ ಸಂಗತಿ. ಶಿಕ್ಷಣ ಸಚಿವರಿಂದ ಶಿಕ್ಷಕರಿಗೆ ಸಿಕ್ಕ ದೊಡ್ಡ ಗೌರವ ಇದು ಎಂದು ಭಾವಿಸುತ್ತೇನೆ” ಎಂದು ಹೇಳಿದರು.
ಕಾರ್ಯಕ್ರದಲ್ಲಿ ಮಾತನಾಡಿದ, 9ನೇ ತರಗತಿ ವಿದ್ಯಾರ್ಥಿನಿ ಸಾಭಮ್ಮ ಮಾತನಾಡಿ, “ಖಾಸಗಿ ಶಾಲೆಗಳಿಗಿಂತ ನಮ್ಮ ಸರ್ಕಾರಿ ಶಾಲೆ ಯಾವುದಕ್ಕೂ ಕಡಿಮೆಯಿಲ್ಲ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ. ನಮಗೆ ಯಾವುದೇ ಕೊರತೆಯಿಲ್ಲ” ಎಂದು ಹೇಳಿದರು.
ಬದುಕಿನ ದಾರಿ ತೋರಿಸುವವರು ಶಿಕ್ಷಕರು: ಮಧು ಬಂಗಾರಪ್ಪ
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು, “ಮಕ್ಕಳು ಬಹಳ ಚೆಂದವಾಗಿ ಮಾತನಾಡಿದರು. ಇಲ್ಲಿಯ ಶಿಕ್ಷಕರು ಹೇಗೆ ಕಲಿಸುತ್ತಿದ್ದಾರೆ ಎಂಬುದು ಇಲ್ಲೇ ಅರ್ಥವಾಗುತ್ತದೆ. ತಂದೆ-ತಾಯಿ ಜನ್ಮ ನೀಡಿದರೆ, ಬದುಕಿನ ದಾರಿ ತೋರಿಸುವವರು ಶಿಕ್ಷಕರು. ಸಾವಿರಾರು ಮಕ್ಕಳಿಗೆ ಬದುಕಿನ ದಾರಿ ತೋರಿಸುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ” ಎಂದು ಶಿಕ್ಷಕರಿಗೆ ಹೇಳಿದರು.
“ಸರ್ಕಾರಿ ಶಾಲೆಯ ಬಗ್ಗೆ ಮಾಧ್ಯಮದಲ್ಲಿ ಟೀಕೆ-ಟಿಪ್ಪಣಿ ಬರುತ್ತಲೇ ಇರುತ್ತವೆ. ಆದರೆ ಈ ಶಾಲೆಯಂತಹ ಸರ್ಕಾರಿ ಶಾಲೆಗಳ ಸಾಧನೆ, ಇಲ್ಲಿರುವ ಸೌಕರ್ಯಗಳನ್ನು ರಾಜ್ಯ ಜನರಿಗೆ ತೋರಿಸುವುದಿಲ್ಲ. ಈ ಶಾಲೆ ದೆಹಲಿಯಲ್ಲಿನ ಸರ್ಕಾರಿ ಶಾಲೆಗಳಿಗಿಂತಲೂ ಉತ್ತಮವಾಗಿದೆ” ಎಂದು ಸಚಿವರು ಹೇಳಿದರು.
ಶಿಕ್ಷಕರು ಹಲವು ವಿಚಾರಗಳನ್ನು ತಮ್ಮ ಗಮನಕ್ಕೆ ತಂದಿದ್ದು, ನಿವೃತ್ತರಾದ ಶಿಕ್ಷಕರು ಆಸಕ್ತಿಯಿಂದ ಮತ್ತೆ ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶವನ್ನು ಕೇಳಿದ್ದಾರೆ. ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಸುಮಾರು 46 ಸಾವಿರ ಶಾಲೆಗಳಿದ್ದು, ಸರ್ಕಾರಿ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಚಿವರು ಹೇಳಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ರಾಜ್ಯದ ಮಾದರಿ ಶಾಲೆಗಳನ್ನಾಗಿ ರೂಪಿಸಲಾಗುವುದು. ಶಿಕ್ಷಣದ ಗುಣಮಟ್ಟ, ಮೂಲಸೌಕರ್ಯ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದರು.
“ಅಧಿಕಾರಕ್ಕೆ ಬಂದ ಕೂಡಲೇ ಹಿಂದಿನ ಸರ್ಕಾರದ ಯಡವಟ್ಟಿನಿಂದ ಕೋರ್ಟ್ ವಿಚಾರಣೆಯಲ್ಲಿ ತಡೆಹಿಡಿದಿದ್ದ 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. 52 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶಿಕ್ಷಕರೇ ಇಲ್ಲ ಎಂಬ ಸ್ಥಿತಿಯನ್ನು ನಾನು ಒಪ್ಪುವುದಿಲ್ಲ” ಎಂದು ಮಧು ಬಂಗಾರಪ್ಪ ಹೇಳಿದರು.
“15 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ” ಎಂದು ಅವರು ತಿಳಿಸಿದರು.






