ಮಹಿಳೆಗೆ ನಿಂದಿಸಿದ ಆರೋಪ: ಮಹೇಶ್ ಶೆಟ್ಟಿ ತಿಮರೋಡಿಗೆ ನಿರೀಕ್ಷಣಾ ಜಾಮೀನು

ಬೆಂಗಳೂರು : ಫೋನ್ ಸಂಭಾಷಣೆಯ ವೇಳೆ ಮಹಿಳೆಯೊಬ್ಬರನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಿದರೆ ಅವರು ನ್ಯಾಯದಾನದಿಂದ ನಾಪತ್ತೆಯಾಗುವ ಸಾಧ್ಯತೆ ಇದೆ ಎಂದು ವಿಚಾರಣಾ ನ್ಯಾಯಾಲಯ ಅವರ ಅರ್ಜಿ ತಿರಸ್ಕರಿಸಿದೆ. ಸೂಕ್ತ ಷರತ್ತುಗಳನ್ನು ವಿಧಿಸಿ ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದಿತ್ತು. ಇಲ್ಲಿ, ವಿಚಾರಣಾ ನ್ಯಾಯಾಲಯ ಲೋಪ ಎಸಗಿದೆ ಎಂದು ನ್ಯಾಯಪೀಠ ಹೇಳಿದೆ.
ತಿಮರೋಡಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ನ್ಯಾಯಪೀಠ, ಅರ್ಜಿದಾರರು ಒಂದು ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಶ್ಯೂರಿಟಿ ಒದಗಿಸಬೇಕು. ವಾರದಲ್ಲಿ ಒಂದು ದಿನ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕು. ಇಂಥ ಅಪರಾಧದಲ್ಲಿ ಭಾಗಿಯಾಗಬಾರದು ಎಂಬ ಷರತ್ತುಗಳನ್ನು ವಿಧಿಸಿದೆ. ಈ ಷರತ್ತುಗಳನ್ನು ಉಲ್ಲಂಘಿಸಿದರೆ ನಿರೀಕ್ಷಣಾ ಜಾಮೀನು ರದ್ದಾಗಲಿದೆ ಎಂದೂ ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.




