ಬೆಂಗಳೂರಿನಲ್ಲಿ ನೂರು ರಸ್ತೆಗಳನ್ನು ಗುರುತಿಸಿ, ಸಮಗ್ರ ಅಭಿವೃದ್ಧಿಗೆ ಕ್ರಮ : ಮಹೇಶ್ವರ್ ರಾವ್

ಮಹೇಶ್ವರ್ ರಾವ್
ಬೆಂಗಳೂರು, ಅ.16: ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ವ್ಯಾಪ್ತಿಯಲ್ಲಿ ಪ್ರಮುಖ 100 ರಸ್ತೆಗಳನ್ನು ಗುರುತಿಸಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಸಲುವಾಗಿ ಯೋಜನೆ ರೂಪಿಸಲಾಗುವುದು ಎಂದು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ರಸ್ತೆಗಳನ್ನು ಸುಸ್ತಿತಿಯಲ್ಲಿಡುವುದು ನಮ್ಮ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ 5 ನಗರ ಪಾಲಿಕೆಗಳಲ್ಲಿ ವಲಯಕ್ಕೆ 10 ರಸ್ತೆಗಳಂತೆ 10 ವಲಯಗಳಿಗೆ ಪ್ರಮುಖ 100 ರಸ್ತೆಗಳನ್ನು ಗುರುತಿಸಬೇಕು. ಆ ರಸ್ತೆಗಳನ್ನು ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತದೆ ಎಂದರು.
ನಾಗರಿಕರ ಅಭಿಪ್ರಾಯದ ಆಧಾರದ ಮೇಲೆ ರಸ್ತೆಗಳನ್ನು ಗುರುತಿಸಿ, ರಸ್ತೆ ಗುಂಡಿಗಳು, ಪಾದಚಾರಿ ಮಾರ್ಗಗಳ ಸ್ಥಿತಿ, ಬಸ್ ನಿಲ್ದಾಣಗಳ ಸ್ಥಿತಿ, ಬೀದಿ ದೀಪಗಳು, ವಾಹನ ಸಂಚಾರದ ದಟ್ಟಣೆ, ರಸ್ತೆಗಳಲ್ಲಿ ನೀರು ನಿಲ್ಲುವುದು, ಕಸ ಸುರಿಯುವ ಸ್ಥಳಗಳು ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಅವುಗಳನ್ನು ನಿವಾರಣೆ ಮಾಡಬೇಕು. ಈ ಸಂಬಂಧ ಸಮಗ್ರ ನಿರ್ವಹಣೆಯ ಹೊಣೆಗಾರಿಕೆಯನ್ನು ವಲಯ ಮುಖ್ಯ ಎಂಜಿನಿಯರ್ಗಳಿಗೆ ವಹಿಸಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆಗಳನ್ನು ದುರಸ್ತಿ ಕಾರ್ಯ ನಡೆಸಲಾಗಿರುತ್ತದೆ. ಆ ಬಳಿಕ ವಿವಿಧ ಸಂಸ್ಥೆಗಳು ಅದನ್ನು ಅಗೆದು ರಸ್ತೆ ಹಾಳು ಮಾಡುತ್ತಾರೆ. ಈ ಸಂಬಂಧ ಜಲಮಂಡಳಿ, ಬೆಸ್ಕಾಂ ಸೇರಿದಂತೆ ಯಾವುದೇ ಇಲಾಖೆಯಾಗಲಿ ಪ್ರಮುಖ ರಸ್ತೆಗಳಲ್ಲಿ ಕೆಲಸ ಕೈಗೊಳ್ಳುವ ಮೊದಲು ಜಿಬಿಎಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಅವರು ನಿರ್ದೇಶನ ನೀಡಿದರು.
ಯೋಜನೆಗಳ ಮೇಲ್ವಿಚಾರಣೆಗಾಗಿ ಯೋಜನಾ ವಿಭಾಗದ ಮುಖ್ಯ ಅಭಿಯಂತರರ ಅಧ್ಯಕ್ಷತೆಯಲ್ಲಿ ವಾರಕ್ಕೊಮ್ಮೆ ಸಭೆ ನಡೆಸಬೇಕು. ಅಭಿವೃದ್ಧಿ ಕಾರ್ಯದ ವೇಳೆ ಮೊದಲಿಗೆ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಂಡು, ಪದೇ ಪದೇ ಉಂಟಾಗುವ ಸಮಸ್ಯೆಗಳ ಮೂಲ ಕಾರಣಗಳಿಗೆ ದೀರ್ಘಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿರುವ ಮೇಲ್ಸೇತುವೆಗಳಿಗೆ ಮಳೆನೀರು ಹರಿದು ಹೋಗುಲು ಪೈಪ್ಗಳನ್ನು ಅಳವಡಿಸಿದ್ದು, ಆ ಪೈಪ್ಗಳು ಹಾಳಾಗಿ ಬೀಳುವ ಮಳೆ ನೀರು ನೇರವಾಗಿ ರಸ್ತೆ ಮೇಲೆ ಬಿದ್ದು, ರಸ್ತೆಯು ಶೀಘ್ರವೇ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಮೇಲ್ಸೇತುವೆಗಳಿಗೆ ಅಳವಡಿಸಿರುವ ಪೈಪ್ ಗಳು ಹಾಳಾಗಿರುವುದನ್ನು ಗುರುತಿಸಿ ಅವುಗಳನ್ನು ಬದಲಾಯಿಸಬೇಕು ಎಂದು ಅವರು ಸೂಚನೆ ನೀಡಿದರು.
ಈ ವೇಳೆ ಮುಖ್ಯ ಅಭಿಯಂತರರುಗಳು, ಅಧೀಕ್ಷಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.







