‘ತ್ರಿಭಾಷ ಸೂತ್ರ’ದ ಬದಲು ಬಹುಭಾಷಾ ಸೂತ್ರ ರೂಪಿಸಿ : ಪ್ರೊ.ನಿರಂಜನಾರಾಧ್ಯ

ಪ್ರೊ.ನಿರಂಜನಾರಾಧ್ಯ
ಬೆಂಗಳೂರು : ಸರಕಾರಗಳು ತ್ರಿಭಾಷಾ ಸೂತ್ರದ ರಾಜಕೀಯವನ್ನು ಪಕ್ಕಕ್ಕಿಟ್ಟು, ಮಕ್ಕಳ ಕಲಿಕೆ ಮತ್ತು ಸೃಜನಾತ್ಮಕತೆಗೆ ಒತ್ತು ನೀಡುವ ಒಂದು ಸಮಗ್ರ ಹೊಸ ಭಾಷಾ ಸೂತ್ರವನ್ನು ಅಳವಡಿಸಿಕೊಳ್ಳುವ ತುರ್ತು ಅಗತ್ಯವಿದ್ದು, ಶಾಲಾ ಶಿಕ್ಷಣದಲ್ಲಿ ತ್ರಿಭಾಷ ಸೂತ್ರದ ಬದಲು ಬಹುಭಾಷಾ ಸೂತ್ರ ರೂಪಿಸಿ ಜಾರಿಗೊಳಿಸಬೇಕು ಎಂದು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ. ಒತ್ತಾಯಿಸಿದ್ದಾರೆ.
ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ಶಾಲೆಗಳಲ್ಲಿ ಮಕ್ಕಳ ತಾಯ್ನುಡಿ ಅಥವಾ ದೇಶೀಯ ಭಾಷೆಯನ್ನು ನಿರ್ಲಕ್ಷಿಸುತ್ತಿರುವುದರಿಂದ ಮಕ್ಕಳ ಭಾಷಾ ಕಲಿಕೆಗೆ ಮಾತ್ರವಲ್ಲದೆ ಸೃಜನಶೀಲ ಕಲಿಕೆಗೂ ದೊಡ್ಡ ಹಿನ್ನೆಡೆಯಾಗಿದೆ. ಮಕ್ಕಳ ಭಾಷಾ ಬೆಳವಣಿಗೆಗೆ ಒತ್ತು ನೀಡುವ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳಿಗೆ ಒಪ್ಪಿಗೆಯಾಗುವ ಒಂದು ಸಮಗ್ರ ಬಹು ಭಾಷಅ ನೀತಿಯನ್ನು ರೂಪಿಸಬೇಕು ಎಂದಿದ್ದಾರೆ.
ಕೇಂದ್ರ ಸರಕಾರ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಅಳವಡಿಸಿತು. ಆಗ ಬಹುತೇಕ ಎಲ್ಲ ರಾಜ್ಯಗಳು ಯಾವುದೇ ನುರಿತ ಶಿಕ್ಷಕರು ಅಥವಾ ಸಾಮಗ್ರಿಗಳಿಲ್ಲದೆ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮಕ್ಕೆ ಮುಂದಾದವು. ಕರ್ನಾಟಕ ಇದಕ್ಕೆ ಹೊರತಲ್ಲ. ಇದರಿಂದ ಮಕ್ಕಳ ಶಿಕ್ಷಣದ ಒಟ್ಟು ಗುಣಮಟ್ಟ ಗಣನೀಯವಾಗಿ ಕುಸಿಯಿತಲ್ಲದೆ, ಭಾಷಾ ಕಲಿಕೆ ಅರೆಬರೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಾಸ್ತವಿಕವಾಗಿ ನೋಡುವುದಾದರೆ, ನಮ್ಮ ಶಿಕ್ಷಣ ವ್ಯವಸ್ಥೆ ಭಾರತದ ಬಹುಭಾಷಾ ನೀತಿಯಲ್ಲಿ ನೆಲೆಗೊಳ್ಳಬೇಕು. ತರಗತಿ ಕೋಣೆಗಳಲ್ಲಿನ ಭಾಷಾ ವೈವಿಧ್ಯತೆಯನ್ನು ಗುರುತಿಸಿ ಅದಕ್ಕೆ ಪೂರಕವಾದ ಭಾಷಾ ಸೂತ್ರವನ್ನು ಕಂಡುಕೊಳ್ಳಬೇಕು. ಈ ದಿಕ್ಕಿನಲ್ಲಿ ಕಲಿಕೆಯನ್ನು ಪುನರ್ ವ್ಯಾಖ್ಯಾನಿಸಬೇಕು. ಜಗತ್ತಿನ ಸುತ್ತ ಒಮ್ಮೆ ಎಚ್ಚರಿಕೆಯಿಂದ ನೋಡಿದಾಗ ಬಹುಭಾಷಾ ಕಲಿಕಾ ಸೂತ್ರದ ಮೂಲಕ ಬಹುತ್ವ ಮತ್ತು ಬಹುಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹಲವು ಉದಾಹರಣೆಗಳು ನಮಗೆ ಕಾಣುತ್ತವೆ ಎಂದು ಅವರು ಹೇಳಿದರು.







