ʼವಿಬಿ-ಜಿ ರಾಮ್ ಜಿʼ ಜಾರಿ ಮಾಡಲು ನಾವು ಬಿಡುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ

ಹುಬ್ಬಳ್ಳಿ : ನರೇಗಾ ಯೋಜನೆಯನ್ನು ಕಿತ್ತುಕೊಳ್ಳುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದ್ದು, ರಾಜ್ಯ ಸರಕಾರದ ಮೇಲೆ ಭಾರ ಹಾಕಿದೆ. ʼವಿಬಿ-ಜಿ ರಾಮ್ ಜಿʼ ಕಾಯ್ದೆ ಜಾರಿಗೆ ತರಲು ನಾವು ಬಿಡುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಹುಬ್ಬಳ್ಳಿಯ ಮಂಟೂರ ರೋಡಿನಲ್ಲಿ ನಡೆದ 42,345 ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರಿಗೆ ಬೆಂಬಲವಾಗಿದ್ದ ಕಾನೂನನ್ನು ಮೂಲೆಗೆ ತಳ್ಳಿದೆ. ನಾವು ಸುಮ್ಮನೆ ಬಿಡುವುದಿಲ್ಲ. ʼವಿಬಿ-ಜಿ ರಾಮ್ ಜಿʼ ಅನುಷ್ಠಾನಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದರು.
ಅನುದಾನ ಹಂಚಿಕೆಯಲ್ಲೂ ಬಿಜೆಪಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇಂತಹ ಮೊಂಡ ಸರಕಾರಕ್ಕೆ ಪಾಠ ಕಲಿಸಲು ಬಡವರು ಒಂದಾಗಬೇಕು ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರಕಾರದಿಂದ ಮಾತ್ರ ಜನಪರ ಕಾರ್ಯಕ್ರಮ ನೀಡಲು ಸಾಧ್ಯವಾಗುತ್ತದೆ. ಇಂದಿರಾ ಗಾಂಧಿ ಮತ್ತು ದೇವರಾಜ ಅರಸ್ ಅವರ ಕಾಲದಲ್ಲಿ ಬಡವರಿಗೆ ಮನೆ ಕೊಡುವ ಕಾರ್ಯಕ್ರಮ ಆರಂಭಗೊಂಡಿತು. ಈಗ ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮನೆ ಉದ್ಘಾಟನೆ ಮಾಡಲಾಗಿದೆ. ಬೇರೆ ರಾಜ್ಯದಲ್ಲಿ ಬಡವರಿಗೆ 1 ಲಕ್ಷಕ್ಕೆ ಮನೆ ಕಟ್ಟಿಸಿ ಕೊಡುವ ಕೆಲಸ ನಡೆದಿಲ್ಲ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರಕಾರ ಈ ಸಾಧನೆ ಮಾಡಿದೆ ಎಂದರು.







