ಬೆಂಗಳೂರು| ʼಟೆಸ್ಟ್ ರೈಡ್ʼ ಹೆಸರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ: ಆರೋಪಿಯ ಬಂಧನ
ಆರೋಪಿಯಿಂದ ಐದು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಸಾಂದರ್ಭಿಕ ಚಿತ್ರ (Photo credit: Grok)
ಬೆಂಗಳೂರು: ಖರೀದಿ ನೆಪದಲ್ಲಿ ಆನ್ಲೈನ್ನಲ್ಲಿ ದ್ವಿಚಕ್ರ ವಾಹನ ಬುಕ್ ಮಾಡಿ ನಂತರ ಟೆಸ್ಟ್ ರೈಡ್ ಹೆಸರಲ್ಲಿ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಇಲ್ಲಿನ ಬಂಡೆಪಾಳ್ಯ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಪ್ರದೀಪ್ ಯಾನೆ ಒಎಲ್ಎಕ್ಸ್ ಪ್ರದೀಪ್ ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿ ಪ್ರದೀಪ್ ಒಎಲ್ಎಕ್ಸ್ ನಲ್ಲಿ ದ್ವಿಚಕ್ರ ವಾಹನ ಮಾರಾಟಗಾರರನ್ನು ಹುಡುಕುತ್ತಿದ್ದ. ಟೆಸ್ಟ್ ಡ್ರೈವ್ಗೆ ದ್ವಿಚಕ್ರ ವಾಹನ ಪಡೆಯುವ ವೇಳೆ ದಾಖಲೆಗಳನ್ನು ಪರಿಶೀಲಿಸುತ್ತೇನೆಂದು ಅಸಲಿ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದ. ಹಣ ಕೊಡುವ ರೀತಿಯಲ್ಲಿ ನಾಟಕ ಮಾಡಿ ಅಸಲಿ ದಾಖಲೆಗಳನ್ನು ತೆಗೆದುಕೊಂಡು ದ್ವಿಚಕ್ರ ವಾಹನ ಸಮೇತ ಪರಾರಿಯಾಗುತ್ತಿದ್ದ ಎಂದು ತಿಳಿದುಬಂದಿದೆ.
ಆರೋಪಿ ಪ್ರದೀಪ ಕಡೂರು ಮೂಲದವನಾಗಿದ್ದು, ನೆಲಮಂಗಲದಲ್ಲಿ ನೆಲೆಸಿದ್ದಾನೆ. ಸದ್ಯ ಆರೋಪಿಯಿಂದ ಐದು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.





