Mandya | ಪ್ರೀತಿಸುವಂತೆ ಯುವಕನಿಂದ ಕಿರುಕುಳ ಆರೋಪ: ಅಪ್ರಾಪ್ತೆ ಆತ್ಮಹತ್ಯೆ

ಮಂಡ್ಯ : ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಯುವಕನು ತನ್ನ ಮತ್ತು ತನ್ನ ತಂದೆ ತಾಯಿ ಮೇಲೆ ಹಲ್ಲೆ ನಡೆಸಿದ್ದರಿಂದ ಮನನೊಂದ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಚಂದಗಾಲು ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಗ್ರಾಮದ ನಿಂಗರಾಜು ಪುತ್ರಿ ಸ್ನೇಹಾ (17) ಮೃತ ಅಪ್ರಾಪ್ತ ಬಾಲಕಿ. ಅದೇ ಗ್ರಾಮದ ಶೋಭಿತ್ ಗೌಡ ಅಲಿಯಾಸ್ ಚಿಂಟು ಎಂಬ ಯುವಕ ತನ್ನ ಸ್ನೇಹಿತರಾದ ಕೃಷಿಕ್‌ಗೌಡ, ಲೀವಿತ್, ಮನೋಜ್‌ಗೌಡ ಎಂಬುವರ ಜೊತೆ ಹಲ್ಲೆ ನಡೆಸಿ ತನ್ನ ಮಗಳ ಸಾವಿಗೆ ಕಾರಣರಾಗಿದ್ದಾರೆ ಎಂದು ಸ್ನೇಹಾಳ ತಾಯಿ ರಂಜಿತಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ವಿವರ: ಶೋಭಿತ್ ಗೌಡ ಕಳೆದ ಕೆಲ ದಿನಗಳಿಂದ ಸ್ನೇಹಾಳನ್ನು ಪ್ರೀತಿಸುವಂತೆ ದುಂಬಾಲು ಬಿದ್ದು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಸ್ನೇಹಾ ಈ ವಿಷಯವನ್ನು ತನ್ನ ಪೋಷಕರಿಗೆ ಹೇಳಿಕೊಂಡಿದ್ದಳು ಎನ್ನಲಾಗಿದೆ.
ಮಗಳಿಗಾಗುತ್ತಿರುವ ಹಿಂಸೆಯನ್ನು ತಪ್ಪಿಸುವುದಕ್ಕೆ ಆಕೆಯ ಪೋಷಕರು ಗ್ರಾಮದ ಮುಖಂಡರೊಟ್ಟಿಗೆ ಶೋಭಿತ್‌ಗೌಡನ ತಂದೆಗೆ ವಿಷಯ ತಿಳಿಸಿ ನಿಮ್ಮ ಮಗನಿಗೆ ಬುದ್ಧಿ ಹೇಳುವಂತೆ ತಾಕೀತು ಮಾಡಿದ್ದಾರೆ. ಆದರೂ, ಶೋಭಿತ್‌ಗೌಡ ಕಿರುಕುಳ ನೀಡುವುದನ್ನು ಮುಂದುವರಿಸಿದ್ದನು ಎಂದು ತಿಳಿದುಬಂದಿದೆ.
ಶುಕ್ರವಾರ ಸಂಜೆ ಶೋಭಿತ್ ಗೌಡ, ಸ್ನೇಹಿತರಾದ ಕೃಷಿಕ್‌ಗೌಡ, ಲೀವಿತ್, ಮನೋಜ್‌ಗೌಡ ಅವರು ಸ್ನೇಹಾಳ ಮನೆ ಬಳಿಗೆ ಬಂದು ಗಲಾಟೆ ಮಾಡಿ ಸ್ನೇಹಾ ಮತ್ತು ಆಕೆಯ ತಂದೆ ತಾಯಿ ಮೇಲೆ ಹಲ್ಲೆ ನಡೆಸಿದ್ದು, ಮನನೊಂದ ಸ್ನೇಹಾ ಮನೆಯ ಕೊಠಡಿಯೊಳಗೆ ತೆರಳಿ ಸೀರೆಯಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾಳೆ ಎನ್ನಲಾಗಿದೆ.
ತಕ್ಷಣವೇ ಅಕ್ಕಪಕ್ಕದವರು ಕೊಠಡಿ ಬಾಗಿಲು ಮುರಿದು ಒಳಗೆ ತೆರಳಿ ಆಕೆಯನ್ನು ರಕ್ಷಿಸಿ, ಮಿಮ್ಸ್ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ತಾಯಿ ರಂಜಿತಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಇತರೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಬಾಲಕಿಯ ಶವ ಪರೀಕ್ಷೆ ನಡೆಯಿತು.
ಆರೋಪಿಗಳು ಪರಾರಿಯಾಗಿದ್ದು, ಈ ಸಂಬಂಧ ಶಿವಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.






