Mangaluru | ತ್ಯಾಜ್ಯ, ಕುಡಿಯುವ ನೀರು, ಒಳಚರಂಡಿ ಅವ್ಯವಸ್ಥೆಯನ್ನು ಆದ್ಯತೆ ಮೇರೆಗೆ ಸರಿಪಡಿಸಲು ಕ್ರಮ : ರಾಹುಲ್ ರತ್ನಂ ಪಾಂಡೆ

ಮಂಗಳೂರು : ನಗರದಲ್ಲಿ ಘನತ್ಯಾಜ್ಯ ವಿಲೇವಾರಿ, ಸ್ವಚ್ಛತೆ, ಕುಡಿಯುವ ನೀರು ಹಾಗೂ ಒಳಚರಂಡಿ ಕುರಿತಂತೆ ಸಾಕಷ್ಟು ಸಮಸ್ಯೆಗಳು ಗಮನಕ್ಕೆ ಬಂದಿದ್ದು, ಆದ್ಯತೆ ನೆಲೆಯಲ್ಲಿ ಅವುಗಳ ಪರಿಹಾರಕ್ಕೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತ ರಾಹುಲ್ ರತ್ನಂ ಪಾಂಡೆ ಭರವಸೆ ನೀಡಿದ್ದಾರೆ.
ಪಾಲಿಕೆ ಕಚೇರಿಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಸಂವಾದದ ವೇಳೆ, ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ 15 ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕೆಲವೊಂದು ಕಡೆ ಭೇಟಿ ನೀಡಿದ ಸಂದರ್ಭ ತಾವು ಗಮನಿಸಿದ ಸಮಸ್ಯೆಗಳನ್ನು ಉಲ್ಲೇಖಿಸುತ್ತಾ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು.
ಪಚ್ಚನಾಡಿಯಲ್ಲಿನ ಸಾಂಪ್ರದಾಯಿಕ ತ್ಯಾಜ್ಯ ವಿಲೇಗೆ ಸಂಬಂಧಿಸಿ ಟೆಂಡರ್ ಆಗಿದ್ದು, ಈ ಕುರಿತು ಸಂಬಂಧಪಟ್ಟ ಕಂಪನಿ ಜತೆ ಸಭೆ ನಡೆಸಬೇಕಿದೆ. ಮನೆಗಳಿಂದ ತ್ಯಾಜ್ಯ ವಿಂಗಡನೆ, ರಸ್ತೆ ಬದಿ ತ್ಯಾಜ್ಯ ಎಸೆಯುವ ಕುರಿತಂತೆಯೂ ವಿಸ್ತೃತ ಯೋಜನೆ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದು ಅವರು ಹೇಳಿದರು.
ನಗರದಲ್ಲಿ ಬಹುದೊಡ್ಡ ಸಮಸ್ಯೆ ಭೂಗತ ಒಳಚರಂಡಿ (ಯುಜಿಡಿ)ಯದ್ದಾಗಿದೆ. 1961ರಲ್ಲಿ ಒಳಚರಂಡಿ ವ್ಯವಸ್ಥೆ ಆರಂಭವಾಗಿ ಈವರೆಗೆ ಶೇ.65ರಷ್ಟು ಮಾತ್ರವೇ ಒಳಚರಂಡಿ ಇದೆ. ಒಳಚರಂಡಿ ಆಗಿರುವ ಶೇ.35ರಷ್ಟು ಭಾಗದಲ್ಲಿ 65 ವರ್ಷಗಳಿಗೂ ಹಳೆಯ ಪೈಪ್‌ಲೈನ್‌ಗಳು ಇರುವುದರಿಂದ ಮಳೆಯಿಂದ ಲೀಕೇಜ್ ಆಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಅದನ್ನು ಸಂಪೂರ್ಣವಾಗಿ ಸರಿಪಡಿಸಲು 1250 ಕೋಟಿ ರೂ.ಗಳ ಅನುದಾನದ ಅಗತ್ಯತೆಯ ಪ್ರಸ್ತಾವನೆಯನ್ನು ಈಗಾಗಲೇ ಪಾಲಿಕೆಯಿಂದ ಸರಕಾರಕ್ಕೆ ಸಲ್ಲಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಮುಂದಿನ ಸಚಿವ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಯುವ ನಿರೀಕ್ಷೆ ಇದ್ದು ಆ ಸಂದರ್ಭ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಈ ಸಮಸ್ಯೆಗೆ ಪರಿಹಾರ ದೊರಕಲಿದೆ. ಈ ನಡುವೆ, ಯುಜಿಡಿಗೆ ಸಂಬಂಧಿಸಿ ತುರ್ತು ಕಾಮಗಾರಿಗಳ ಅಗತ್ಯವಿರುವಲ್ಲಿ ಪಾಲಿಕೆ ನಿಧಿಯಿಂದ ಕ್ರಮ ವಹಿಸಲಾಗುವುದು. ದಂಬೇಲ್ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ವೆಟ್‌ವೆಲ್‌ಗಳು ಶಿಥಿಲಗೊಂಡಿರುವುದು ಗಮನಕ್ಕೆ ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ವೆಟ್‌ವೆಲ್‌ಗಳ ಪ್ರಸಕ್ತ ಸಾಮರ್ಥ್ಯವನ್ನು ಗಮನದಲ್ಲಿಸಿಕೊಂಡು ಮುಂದಿನ 2051ರ ಜನಸಂಖ್ಯೆಗೆ ಅನುಗುಣವಾಗಿ ಅವುಗಳನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಆದ್ಯತೆ ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದವರು ವಿವರ ನೀಡಿದರು.
ಎಸ್‌ಟಿಪಿಗಳ ತ್ಯಾಜ್ಯ ನೀರು ಸಂಸ್ಕರಣೆಗೆ ಕ್ರಮ
ನಗರದಲ್ಲಿರುವ ನಾಲ್ಕು ಎಸ್‌ಟಿಪಿಗಳಲ್ಲಿ ಸದ್ಯ ಕಾವೂರು ಎಸ್‌ಟಿಪಿಯಲ್ಲಿ ಮಾತ್ರವೇ ತ್ಯಾಜ್ಯ ನೀರು ಸಂಸ್ಕರಣೆಗೊಂಡು ಎಂಸಿಎಫ್‌ಗೆ ಮರುಬಳಕೆಯಾಗುತ್ತಿದೆ. ಎಸ್‌ಟಿಪಿಗಳ ಕೊಳಚೆ ನೀರು ನದಿಗಳಿಗೆ ಹರಿದು ಜಲಚರಗಳ ಸಾವು, ನೀರು ಮಾಲಿನ್ಯಗೊಳ್ಳುತ್ತಿರುವ ಕುರಿತಂತೆ ಪಾಲಿಕೆ ಮೇಲೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಎನ್‌ಜಿಟಿಯಿಂದ ಹಲವು ಪ್ರಕರಣಗಳು ದಾಖಲಾಗಿವೆ. ಬಜಾಲ್, ಪಚ್ಚನಾಡಿ ಮೊದಲಾದ ಎಸ್‌ಟಿಪಿಗಳಲ್ಲಿ ಪ್ರಾಥಮಿಕ ಹಂತದ ಸಂಸ್ಕರಣೆ ಮಾಡಲಾಗುತ್ತಿದೆಯೇ ಹೊರತು ದ್ವಿತೀಯ ಹಂತದಲ್ಲಿ ಸಂಸ್ಕರಣೆ ನಡೆಯುತ್ತಿಲ್ಲ.ಬಜಾಲ್ ಮತ್ತು ಪಚ್ಚನಾಡಿಯಲ್ಲಿ ದ್ವಿತೀಯ ಹಂತದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ರಚನೆಯ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಕಾವೂರು ಎಸ್‌ಟಿಪಿಯಲ್ಲಿ ಕೈಗಾರಿಕೆಯ ಬೇಡಿಕೆಯ ಪ್ರಮಾಣದಲ್ಲಿ ಸಂಸ್ಕರಣೆಗೊಂಡ ನೀರು ಸಿಗುತ್ತಿಲ್ಲ. ಹಾಗಾಗಿ ಪಚ್ಚನಾಡಿ ಎಸ್‌ಟಿಪಿ ನೀರು ಬಳಕೆ ಕುರಿತಂತೆ ಈ ಹಿಂದೆಯೇ ಆಗಿರುವ ಒಪ್ಪಂದದ ಪ್ರಕಾರ ಪಚ್ಚನಾಡಿಯಿಂದ ಕಾವೂರಿಗೆ ನೀರು ಹರಿಸಿ ಕೈಗಾರಿಕೆಗೆ ಬಳಸಬಹುದಾಗಿದೆ. ಇದಕ್ಕಾಗಿ 25 ಕೋಟಿ ರೂ.ಗಳ ಅಂದಾಜು ವೆಚ್ಚ ತಯಾರಿಸಲಾಗಿದ್ದು, ಅದನ್ನು ಅರ್ಬನ್ ಚಾಲೆಂಜ್ ಫಂಡ್ (ಯುಸಿಎಫ್)ನಿಂದ ಪಡೆದು ಅಗತ್ಯ ಕ್ರಮ ವಹಿಸಲಾಗುವುದು ಎಂದು ಆಯುಕ್ತ ರಾಹುಲ್ ರತ್ನಂ ಪಾಂಡೆ ವಿವರ ನೀಡಿದರು.
ಅಗತ್ಯವಿರುವಲ್ಲಿ ರಸ್ತೆ ಅಗಲೀಕರಣ- 60 ವಾರ್ಡ್‌ಗೂ ಪ್ರತಿದಿನ ನೀರು
ಕೆಲವೊಂದು ಪ್ರಮುಖ ರಸ್ತೆಗಳ ಅಗಲೀಕರಣ ಹಾಗೂ ಪುಟ್‌ಪಾತ್‌ಗಳ ನಿರ್ಮಾಣಕ್ಕೂ ಆದ್ಯತೆ ನೆಲೆಯಲ್ಲಿ ಕ್ರಮ ವಹಿಸಲಾಗುವುದು. ಸದ್ಯ ಪಾಲಿಕೆಯ 50 ವಾರ್ಡ್‌ಗಳಿಗೆ ಪ್ರತಿದಿನ ಹಾಗೂ 10 ವಾರ್ಡ್‌ಳಲ್ಲಿ ಎರಡು ದಿನಕೊಮ್ಮೆ ನೀರು ಪೂರೈಕೆ ನಡೆಯುತ್ತಿದೆ. ಪ್ರತಿ ವಾರ್ಡ್‌ಗಳ ಪ್ರತಿ ಮನೆಗೂ ಪ್ರತಿದಿನ ನೀರು ಸರಬರಾಜು ಮಾಡಬೇಕೆಂಬುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಡಬ್ಲ್ಯುಟಿಪಿ (ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್)ನಲ್ಲಿ ಬದಲಾವಣೆ ಮಾಡಿಕೊಂಡು ಹಬ್ಬಗಳ ಬಳಿಕ ಎಲ್ಲಾ ವಾರ್ಡ್‌ಗಳಿಗೂ ಪ್ರತಿದಿನ ನೀರು ಸಿಗುವಂತೆ ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದರು.
ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತಿದ್ದು, ಅದರ ಜತೆಗೆ ಜನ ಜಾಗೃತಿ ಅಭಿಯಾನವನ್ನೂ ನಡೆಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೆ ಕೆಲವೊಂದು ಸರಕಾರೇತರ ಸಂಸ್ಥೆಗಳವರು ಸ್ವಯಂ ಪ್ರೇರಿತವಾಗಿ ಈ ಕಾರ್ಯಕ್ಕೆ ಸಹಕಾರ ನೀಡಲು ಮುಂದಾಗಿದ್ದು,ಅವರ ಜತೆ ಚರ್ಚಿಸಿ ಮುಂದಿನ ಕ್ರಮ ವಹಿಸುವುದಾಗಿ ಪಾಲಿಕೆ ಆಯುಕ್ತರು ತಿಳಿಸಿದರು.
ಮುಂದಿನ ದಿನಗಳಲ್ಲಿ ರಸ್ತೆ ಅಗಲೀಕರಣದ ಸಂದರ್ಭ ಮರಗಳನ್ನು ನೆಟ್ಟು ಪೋಷಣೆ ಮಾಡುವ ಬಗ್ಗೆಯೂ ಕ್ರಮ ವಹಿಸಲಾಗುವುದು.
ಮಾರುಕಟ್ಟೆಗಳ ಸ್ಥಿತಿಗತಿ ಪರಿಶೀಲನೆ ಬಗ್ಗೆ ಮುಂದಿನ ವಾರ ಸಭೆ
ಉರ್ವಾ ಮಾರುಕಟ್ಟೆ ಸೇರಿದಂತೆ ನಗರದ ಹಲವೊಂದು ಮಾರುಕಟ್ಟೆಗಳು ನಿರ್ಮಾಣವಾಗಿ ಹಲವು ಸಮಯಗಳಾದರೂ ಬಳಕೆಯಲ್ಲಿಲ್ಲದಿರುವುದು ಗಮನಕ್ಕೆ ಬಂದಿದೆ. ಮಾರುಕಟ್ಟೆಗಳಿಗೆ ಸಾಕಷ್ಟು ಹಣವನ್ನು ವೆಚ್ಚ ಮಾಡಲಾಗಿದ್ದು, ಅದಕ್ಕಾಗಿ ಸಾಕಷ್ಟು ಸಾಲವನ್ನು ಪಡೆಯಲಾಗಿದೆ. ಹಾಗಾಗಿ ಅವುಗಳ ಬಳಕೆ ಬಗ್ಗೆ ಕ್ರಮ ಅಗತ್ಯವಾಗಿದೆ. ಕಂಕನಾಡಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಕೇಂದ್ರ ಮಾರುಕಟ್ಟೆ ಸೇರಿದಂತೆ ನಗರದ ಎಲ್ಲಾ ಮಾರುಕಟ್ಟೆಗಳ ಸ್ಥಿತಿಗತಿಗಳ ಬಗ್ಗೆ ಮುಂದಿನ ವಾರ ಸಭೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ತಿಳಿಸಿದರು.
ಫುಟ್‌ಪಾತ್‌ಗಳು ಪಾದಾಚಾರಿಗಳಿಗೆ ಮಾತ್ರ- ಬೀದಿ ವ್ಯಾಪಾರಿಗಳಿಗೂ ಸೂಕ್ತ ವ್ಯವಸ್ಥೆ
ನಗರದಲ್ಲಿ ಫುಟ್‌ಪಾತ್‌ಗಳು ಪಾದಾಚಾರಿಗಳಿಗೆ ಮಾತ್ರವೇ ಸೀಮಿತವಾಗಿರಬೇಕು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದಂತೆ ಕ್ರಮ ವಹಿಸುವ ಜತೆಗೆ ಬೀದಿಬದಿ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡಲಾಗುವುದು. ಬೀದಿಬದಿ ವ್ಯಾಪಾರಿಗಳ ಮಾರ್ಗಸೂಚಿಯಂತೆ ಯಾರೆಲ್ಲಾ ಅರ್ಹರು, ರಾಜ್ಯದವರಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಮೂಲಕ ನಿಯಮಗಳನ್ನು ಪಾಲನೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಭರವಸೆ ನೀಡಿದರು.






