ಹಿಂಸೆ, ಬೆದರಿಕೆ ಬಿಜೆಪಿಯ ಸಂಸ್ಕೃತಿಯೇ?: ಮಂಜುನಾಥ್ ಗೌಡ

ಬೆಂಗಳೂರು : ‘ಕಾಂಗ್ರೆಸ್ ಕಾರ್ಯಕರ್ತರನ್ನು ತುಂಡು-ತುಂಡಾಗಿ ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇವೆ’ ಎಂಬ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಖಂಡಿಸಿದ್ದಾರೆ.
ಮಂಗಳವಾರ ಪ್ರಕಟಣೆ ನೀಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ವಿಚಾರಗಳ ಮೂಲಕ ಉತ್ತರಿಸಬೇಕೇ ಹೊರತು, ಕೊಲೆ ಬೆದರಿಕೆಗಳ ಮೂಲಕವಲ್ಲ. ಇಂತಹ ಹೇಳಿಕೆಗಳು ರಾಜಕೀಯ ಸಂಸ್ಕೃತಿಯ ಅಧಃಪತನವನ್ನು ತೋರಿಸುತ್ತವೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸರ್ದಾರ್ ಪಟೇಲ್ ಮತ್ತು ಸುಭಾಷ್ ಚಂದ್ರಬೋಸ್ ಅವರಂತಹ ಅಪ್ರತಿಮ ದೇಶಭಕ್ತರನ್ನು ನೀಡಿದೆ. ಅಂತಹ ಹೋರಾಟದ ಪರಂಪರೆಯಿರುವ ಕಾಂಗ್ರೆಸ್ ಕಾರ್ಯಕರ್ತರು ನಿಮ್ಮ ಬೆದರಿಕೆಗಳಿಗೆ ಹೆದರುವ ಹೇಡಿಗಳಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬೆನ್ನ ಹಿಂದೆ ನಿಂತು ಮಾತನಾಡುವ ಶಕುನಿ ರಾಜಕಾರಣ ಮತ್ತು ವರ್ತನೆ ಬಿಟ್ಟು, ನಿಜವಾದ ತಾಕತ್ತಿದ್ದರೆ ಕಾಂಗ್ರೆಸ್ ಕಚೇರಿಯ ಬಳಿ ಬಂದು ಮಾತನಾಡಿ. ನಿಮ್ಮ ಮಾತುಗಳಿಗೆ ವಿಚಾರದಿಂದಲೇ ಉತ್ತರಿಸುವ ಶಕ್ತಿ ಕಾಂಗ್ರೆಸ್ಗಿದೆ. ಸಾರ್ವಜನಿಕ ಜೀವನದಲ್ಲಿರುವವರು ಇಂತಹ ಹಿಂಸಾತ್ಮಕ ಹೇಳಿಕೆಗಳನ್ನು ನೀಡಿದರೆ ಯುವಜನತೆಗೆ ಯಾವ ಸಂದೇಶ ರವಾನೆಯಾಗುತ್ತದೆ? ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ.




