ಪ್ರತ್ಯೇಕ ಹೋರಾಟಗಳಿಂದ ಗೆಲುವು ಸಾಧ್ಯವಿಲ್ಲ : ಮಾರಸಂದ್ರ ಮುನಿಯಪ್ಪ

ಬೆಂಗಳೂರು : ರಾಜ್ಯದಲ್ಲಿ ವಿವಿಧ ಸಂಘಟನೆಗಳ ಹೋರಾಟಗಾರರು ಪ್ರತ್ಯೇಕವಾಗಿ 100 ವರ್ಷಗಳ ಕಾಲ ಹೋರಾಟ ಮಾಡಿದರೂ ಗೆಲುವು ಸಾಧ್ಯವಿಲ್ಲ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ನವ ಕರ್ನಾಟಕ ನಿರ್ಮಾಣದ ವತಿಯಿಂದ ‘ರೈತ ಚಳುವಳಿ, ದಲಿತ ಚಳುವಳಿ, ಕನ್ನಡ ಭಾಷಾ ಚಳುವಳಿ, ಕಾರ್ಮಿಕ ಚಳುವಳಿ, ಪರಿಸರ ಚಳುವಳಿ, ಮಹಿಳಾ ಚಳುವಳಿ ಮತ್ತು ವಿದ್ಯಾರ್ಥಿ-ಯುವಜನರ ಚಳುವಳಿಗಳು ರೂಪಿಸಿರುವ ಪ್ರಾದೇಶಿಕ ರಾಜಕೀಯ ಪಕ್ಷದ ಮುನ್ನೋಟದ ‘ಜನತಾ ಪ್ರಣಾಳಿಕೆ’ ಬಿಡುಗಡೆ ಮಾಡಿದರು.
ಪ್ರಜಾಪ್ರಭುತ್ವದಲ್ಲಿ ಯಾವ ಪ್ರಜೆಗಳು ಹೆಚ್ಚಿದ್ದಾರೋ, ಅವರು ಅಧಿಕಾರ ಮಾಡಬೇಕು. ಹತ್ತಾರು ವರ್ಷಗಳು ಹೋರಾಟ ಮಾಡಿ ಅಂಬೇಡ್ಕರ್ ಸಂವಿಧಾನ ನೀಡುವುದರ ಮೂಲಕ ದಲಿತ, ಹಿಂದುಳಿದ ವರ್ಗದವರಿಗೆ, ಮುಸ್ಲಿಮ್‍ರಿಗೆ, ಮಹಿಳೆಯರಿಗೆ ಮತಧಾನದ ಹಕ್ಕು ನೀಡಿದ್ದಾರೆ. ಆ ಓಟಿಗೆ ಬೆಲೆ ಕಟ್ಟುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಕಡಿಮೆ ಸಂಖ್ಯೆಯಲ್ಲಿರುವ ಶ್ರೀಮಂತರು ಇಂದು ರಾಜ್ಯ, ದೇಶವನ್ನು ಆಳುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿರುವ ಶೂದ್ರರು, ಧಾರ್ಮಿಕ ಅಲ್ಪಸಂಖ್ಯಾತರು ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಗಿದ್ದಾರೆ ಎಂದು ಮಾರಸಂದ್ರ ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.
ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹೀಂ ಮಾತನಾಡಿ, ‘ಇಂದು ಹಣ ಮತ್ತು ಜಾತಿಯ ಮೇಲೆ ರಾಜಕೀಯ ಅಧಿಕಾರ ಪಡೆದುಕೊಳ್ಳುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸೋತವರು 150 ಕೋಟಿ ರೂ. ಖರ್ಚು ಮಾಡಿದ್ದರೆ, ಗೆದ್ದವರು 100 ಕೋಟಿ ರೂ.ಖರ್ಚು ಮಾಡಿದ್ದಾರೆ. ಎಲ್ಲಿಯವರೆಗೂ ಚುನಾವಣೆಯಲ್ಲಿ ರಾಜಕಾರಣಿಗಳು ಕೊಡುವ ಹಣದಿಂದ 5 ವರ್ಷದ ಜೀವನ ಹಾಳು ಮಾಡಿಕೊಳ್ಳುತ್ತಿದ್ದೇವೆನ್ನುವ ಚಿಂತೆ ಬರುವುದಿಲ್ಲವೋ, ಅಲ್ಲಿಯವರೆಗೂ ನಮ್ಮ ಸ್ಥಿತಿ ದುರ್ಗತಿಕವಾಗಿಯೇ ಇರುತ್ತದೆ ಎಂದರು.
ರಾಜ್ಯದಿಂದ 4.5 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತಿದ್ದೇವೆ. ಕೇಂದ್ರದಿಂದ ವಾಪಸ್ಸು ಬರುತ್ತಿರುವುದು 50 ಸಾವಿರ ಕೋಟಿ ರೂ. ಮಾತ್ರ. ಇದು ಯಾವ ನ್ಯಾಯ? ರಾಜ್ಯದಲ್ಲಿರುವ 26 ಸಂಸದರಿಗೆ ಇದನ್ನು ಕೇಳುವ ಧೈರ್ಯವಿದಿಯಾ? ಎಲ್ಲರೂ ನಪುಂಸಕರಾಗಿ ಕುಳಿತಿದ್ದಾರೆ. ಯಾರೂ ಮೋದಿಯ ವಿರುದ್ಧ ಮಾತನಾಡುವುದಕ್ಕೆ ತಯಾರಾಗಿಲ್ಲ. ಜೀವನದಲ್ಲಿ ಮಾಡಬೇಕೆನ್ನುವ ಛಲ ಇರಬೇಕು. ಮಾಜಿ ಪ್ರಧಾನಿ ದೇವೇಗೌಡರಿಗೆ ಇರುವ ಛಲವೆಲ್ಲ ತಮ್ಮ ಮಕ್ಕಳು, ಮೊಮ್ಮಕ್ಕಳು ಬರಬೇಕೆನ್ನುವುದು ಬಿಟ್ಟರೆ, ರಾಜ್ಯದ ಜನರ ಪರವಾಗಿಲ್ಲ ಎಂದು ಇಬ್ರಾಹೀಂ ಟೀಕಿಸಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್, ಎಐಬಿಎಸ್‍ಪಿಯ ರಾಷ್ಟ್ರೀಯ ಸಂಯೋಜಕ ಎಂ.ಗೋಪಿನಾಥ್, ಆರ್‍ಪಿಐನ ಆರ್.ಮೋಹನ್‍ರಾಜ್, ರೈತ ಸಂಘದ ಮಂಜುನಾಥ್‍ಗೌಡ, ಮಾಜಿ ಶಾಸಕ ಎಚ್.ಡಿ.ಬಸವರಾಜು, ಡಾ.ಎನ್.ಮೂರ್ತಿ ಸೇರಿದಂತೆ ಸಮನ್ವಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.







