ವಿದ್ಯಾರ್ಥಿಗಳಲ್ಲಿ ಭಾಷಾ ಹಿಡಿತ,ಶಿಸ್ತು,ಏಕಾಗ್ರತೆ ಅವಶ್ಯ: ನಟ ದೊಡ್ಡಣ್ಣ
ಬೆಂವಿವಿ ವಿದ್ಯುನ್ಮಾನ ವಿಭಾಗದಲ್ಲಿ ವಿದ್ಯಾರ್ಥಿ ಅಭಿಶಿಕ್ಷಣ ಕಾರ್ಯಕ್ರಮ ಉದ್ಘಾಟನೆ

ಬೆಂಗಳೂರು: "ವಿದ್ಯಾರ್ಥಿಗಳು ಗುರಿಯತ್ತ ಏಕಾಗ್ರತೆ, ಪರಿಶ್ರಮ ಹಾಗೂ ಕಲಿಕೆಯ ಆಸಕ್ತಿಯಿಂದ ಮುನ್ನಡೆಯಬೇಕು" ಎಂದು ಹಿರಿಯ ನಟ ಎಸ್. ದೊಡ್ಡಣ್ಣ ಹೇಳಿದರು.
ಬೆಂಗಳೂರು ವಿಶ್ವವಿದ್ಯಾನಿಲಯ ಜ್ಞಾನಭಾರತಿ ಆವರಣದ ವಿದ್ಯುನ್ಮಾನ ಮಾಧ್ಯಮ ವಿಭಾಗದ ವತಿಯಿಂದ ಆಯೋಜಿಸಿದ್ದ ಎರಡು ವಾರಗಳ ಅಭಿಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
"ಕನ್ನಡ ಚಿತ್ರರಂಗದ ಸಾಧಕರ ಜೀವನ ಮತ್ತು ಸಾಧನೆಗಳಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆದು, ಅವರ ಶಿಸ್ತು, ಪರಿಶ್ರಮ, ಸೃಜನಶೀಲತೆ ಹಾಗೂ ಕಲಿಕೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಕನ್ನಡ ಭಾಷೆಯ ಸೌಂದರ್ಯ, ಶ್ರೀಮಂತಿಕೆ ಮತ್ತು ಸಾಹಿತ್ಯಿಕ ಸೊಗಡನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಮಾತನಾಡಿ, ತಂತ್ರಜ್ಞಾನ ಹಾಗೂ ಡಿಜಿಟಲ್ ಮಾಧ್ಯಮದ ಪರಿಣಾಮಕಾರಿ ಬಳಕೆಯಿಂದ ಪತ್ರಕರ್ತರಿಗೆ ಹೊಸ ಅವಕಾಶಗಳಿವೆ. ಇಂದಿಗೂ ಗಟ್ಟಿಯಾದ ಪತ್ರಕರ್ತರಿಗೆ ಮನ್ನಣೆ ಇದ್ದು, ಓದುಗರ-ಪ್ರೇಕ್ಷಕರ ನಿರೀಕ್ಷೆಗಳನ್ನು ತಲುಪಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್, ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಂಯೋಜಕರು ಪ್ರೊ.ವಾಹಿನಿ ಅರವಿಂದ್, ಪ್ರಾಧ್ಯಾಪಕರು ಪ್ರೊ.ರಾಜೇಶ್ವರಿ ಆರ್. ಉಪಸ್ಥಿತರಿದ್ದರು.






