ವೈಟ್‍ಫೀಲ್ಡ್‌ನಲ್ಲಿನ ಕೆಟಿಪಿಒ ಜಾಗದ ಸಮಗ್ರ ಅಭಿವೃದ್ಧಿಗೆ ತೀರ್ಮಾನ; ವಿಶ್ವದರ್ಜೆಯ ಬಹುಪಯೋಗಿ ವಸ್ತು ಪ್ರದರ್ಶನ ಸಭಾಂಗಣ, ಕನ್ವೆನ್ಷನ್ ಸೆಂಟರ್ ಅಭಿವೃದ್ಧಿ : ಎಂ.ಬಿ.ಪಾಟೀಲ್

ಬೆಂಗಳೂರು : ರಾಜಧಾನಿಯ ಪ್ರತಿಷ್ಠಿತ ಕೈಗಾರಿಕಾ ನಗರಗಳಲ್ಲಿ ಒಂದಾಗಿರುವ ವೈಟ್‍ಫೀಲ್ಡ್ ನಲ್ಲಿ ಕರ್ನಾಟಕ ವ್ಯಾಪಾರ ಉತ್ತೇಜನಾ ಸಂಸ್ಥೆ(ಕೆಟಿಪಿಒ) ಹೊಂದಿರುವ 48.35ಎಕರೆ ಪ್ರದೇಶದಲ್ಲಿ ವಿಶ್ವದರ್ಜೆಯ ಕನ್ವೆನ್ಷನ್ ಸೆಂಟರ್, ಸಭಾಂಗಣ, ಪ್ರದರ್ಶನಾಂಗಣ ಇತ್ಯಾದಿಗಳಿರುವ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ಇದರಿಂದ ನಗರದಲ್ಲಿ ವಾಣಿಜ್ಯ-ವ್ಯಾಪಾರ ವಹಿವಾಟಿಗೆ ಉತ್ತೇಜನ ಸಿಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಕೇಂದ್ರ ಸರಕಾರದ ಭಾರತೀಯ ವ್ಯಾಪಾರ ಉತ್ತೇಜನಾ ಸಂಸ್ಥೆ (ಐಟಿಪಿಒ) ಅಧ್ಯಕ್ಷ ಜಾವೆದ್ ಅಶ್ರಫ್ ಅವರ ಜತೆ ಕೆಟಿಪಿಒ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿ ಹಾಲಿ ಇರುವ ವ್ಯವಸ್ಥೆಯ ಪರಿಶೀಲನೆ ಮತ್ತು ಖಾಲಿ ಇರುವ ಜಾಗದಲ್ಲಿ ಮಾಡಬಹುದಾದ ಹೊಸ ವ್ಯವಸ್ಥೆಗಳ ಸಾಧ್ಯತೆ ಕುರಿತು ಮಹತ್ತ್ವದ ಚರ್ಚೆ ನಡೆಸಿದರು.
ಕೆಟಿಪಿಒದಲ್ಲಿ ಶೇ.51ರಷ್ಟು ಶೇರು ಐಟಿಪಿಒ ಹೊಂದಿದೆ. ರಾಜ್ಯ ಸರಕಾರ ಶೇ.49ರಷ್ಟು ಷೇರು ಹೊಂದಿದ್ದು ಏನೇ ಅಭಿವೃದ್ಧಿಪಡಿಸಬೇಕೆಂದರೂ ಸಮನ್ವಯದಿಂದ ಕೆಲಸ ಮಾಡಬೇಕಾಗುತ್ತದೆ. ಈ ಕಾರಣಕ್ಕೆ ಇಂದು ಮಹತ್ವದ ಸಭೆ ನಡೆಯಿತು.
ಈ ಬಗ್ಗೆ ಮಾತನಾಡಿದ ಪಾಟೀಲ್ ಅವರು, ‘ಇದೊಂದು ವಿವಿಧೋದ್ದೇಶ ಯೋಜನೆಯಾಗಿದೆ. ಇಲ್ಲಿ ಕೆಟಿಪಿಒ 50 ಎಕರೆ ಭೂಮಿ ಹೊಂದಿತ್ತು. ಮೆಟ್ರೋ ರೈಲು ನಿಗಮಕ್ಕೆ 1.65 ಎಕರೆ ಹೋದ ಮೇಲೆ 48.35 ಎಕರೆ ಉಳಿದಿದೆ. ಇಲ್ಲಿ ಖಾಲಿ ಇರುವ ಜಾಗದಲ್ಲಿ ವಿವಿಧ ಉದ್ದೇಶಗಳಿಗೆ ಬಳಸಬಹುದಾದ ಭವಿಷ್ಯದ ಆಧುನಿಕ ಪ್ರದರ್ಶನ ಸಭಾಂಗಣಗಳು, ಮೆಗಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲ ಆಗುವ ಸಭಾಂಗಣಗಳು, ವಾಹನ ನಿಲುಗಡೆ ಸೇರಿದಂತೆ ಇತರ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.
ಕೆಟಿಪಿಒದಲ್ಲಿ ಖಾಲಿ ಇರುವ ಜಾಗದ ಪೈಕಿ 5ಎಕರೆ ವಿಸ್ತೀರ್ಣದಲ್ಲಿ ಉದ್ದೇಶಿತ ಜಾಗತಿಕ ಮಟ್ಟದ ವ್ಯಾಪಾರ, ಪ್ರದರ್ಶನ ಮತ್ತು ಸಮಾವೇಶ ತಾಣ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಆರ್ ಎಸ್‍ಪಿ ಕಂಪೆನಿ ವಿನ್ಯಾಸ ಸಿದ್ಧಪಡಿಸಿದೆ. ನಮ್ಮ ಯೋಜನೆಯು ಮುಂಬೈನಲ್ಲಿರುವ ಜಿಯೋ ವಲ್ರ್ಡ್ ಕನ್ವೆನ್ಷನ್ ಸೆಂಟರ್ ಗಿಂತ ಚೆನ್ನಾಗಿರಬೇಕು. ಹೀಗಾಗಿ ಆರ್‌ಎಸ್‍ಪಿ ಕಂಪೆನಿಗೆ ಮುಂಬೈಗೆ ಭೇಟಿ ನೀಡಿ, ಇಡೀ ಯೋಜನೆಯನ್ನು ಮರುವಿನ್ಯಾಸ ಮಾಡುವಂತೆ ಸೂಚಿಸಲಾಗಿದೆ. ಜತೆಗೆ ದಿಲ್ಲಿಯ ಭಾರತ ಮಂಟಪಂ ಮತ್ತು ಯಶೋಭೂಮಿ ಯೋಜನೆಗಳಲ್ಲಿ ಇರುವ ದೋಷಗಳ ಕಡೆಗೆ ಗಮನಹರಿಸಿ, ಅದು ನಮ್ಮಲ್ಲಿ ಮರುಕಳಿಸದಂತೆ ನೋಡಿಕೊಳ್ಳಲು ಹೇಳಲಾಗಿದೆ ಎಂದು ಅವರು ವಿವರಿಸಿದರು.
ಈ ಜಾಗದಲ್ಲಿ 2002ರಲ್ಲಿ ಕಟ್ಟಿರುವ ಒಂದು ವಸ್ತು ಪ್ರದರ್ಶನ ಸಭಾಂಗಣ ಮತ್ತು 2024ರಲ್ಲಿ ನಿರ್ಮಿಸಿರುವ ಇನ್ನೊಂದು ವಸ್ತು ಪ್ರದರ್ಶನ ಸಭಾಂಗಣವಿದೆ. ಆದರೆ ಇವು ಇಂದಿನ ಅಗತ್ಯಗಳಿಗೆ ಸಾಲುತ್ತಿಲ್ಲ. ಆದ್ದರಿಂದ ನೆಲಮಹಡಿ ಮತ್ತು ಮೇಲ್ಮಹಡಿಯಲ್ಲಿ ತಲಾ 10 ಸಾವಿರ ಚದರ ಮೀಟರ್ ವಿಸ್ತೀರ್ಣದ (ಒಟ್ಟು 20 ಸಾವಿರ ಚದರ ಮೀಟರ್) ಅತ್ಯಾಧುನಿಕ ವಸ್ತು ಪ್ರದರ್ಶನಾಲಯ ಮತ್ತು ಕನ್ವೆನ್ಷನ್ ಸೆಂಟರ್ ಹಾಗೂ ಸಭಾಂಗಣಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇಲ್ಲಿ 500 ಕಾರುಗಳ ನಿಲುಗಡೆಗೆ ವ್ಯವಸ್ಥೆ ಇರಲಿದೆ ಎಂದು ಅವರು ನುಡಿದಿದರು.
ಐದು ಎಕರೆ ಜಾಗದಲ್ಲಿ ಮೈದಾಳಲಿರುವ ಉದ್ದೇಶಿತ ಸಭಾಂಗಣದಲ್ಲಿ ಸಮಾವೇಶ, ಉತ್ಪನ್ನಗಳ ಬಿಡುಗಡೆ, ಸಭಾಂಗಣಗಳು, ವಾಣಿಜ್ಯ ಪ್ರದರ್ಶನ, ವ್ಯಾಪಾರ ಸಂಬಂಧಿ ಕಾರ್ಯಕ್ರಮಗಳು, ಮೆಗಾ ಸಂಗೀತ ಕಛೇರಿಗಳಿಗೆ ಅವಕಾಶ ಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಮಾಸ್ಟರ್ ಪ್ಲ್ಯಾನ್ ಕುರಿತೂ ಚರ್ಚಿಸಲಾಯಿತು. ಜತೆಗೆ ಹಾಲಿ ಇರುವ ಎರಡು ಸಭಾಂಗಣಗಳಲ್ಲಿ ಒಂದು ಹಳೆಯದಾಗಿದೆ. ಇದನ್ನು ಹಾಗೆಯೇ ಉಳಿಸಿಕೊಳ್ಳಬೇಕೇ ಅಥವಾ ಬೇರೇನು ಮಾಡಬೇಕು ಎನ್ನುವ ಚಿಂತನೆಯೂ ಇದೆ. ಒಟ್ಟಿನಲ್ಲಿ ಈ ಸ್ಥಳದಲ್ಲಿ ಜಿಯೋಗಿಂತ ಒಳ್ಳೆಯ ಸೌಕರ್ಯ ಬರಬೇಕು ಎನ್ನುವುದು ಸರಕಾರದ ಬಯಕೆಯಾಗಿದೆ ಎಂದು ಅವರು ನುಡಿದರು.
ಅಲ್ಲದೆ, ಕುಂದಲಹಳ್ಳಿ ಮೆಟ್ರೋ ನಿಲ್ದಾಣ ಹಾಗೂ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ 14 ಎಕರೆ ಖಾಲಿ ಜಾಗವನ್ನು ಮಾನಿಟೈಸ್ ಮಾಡುವ ಬಗ್ಗೆಯೂ ಚರ್ಚಿಸಲಾಯಿತು. ಈ ಸಂಬಂಧ ಸಲಹೆ ನೀಡಲು ವಹಿವಾಟು ಸಲಹೆಗಾರರನ್ನು ನೇಮಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಐಟಿಪಿಒ ಅಧ್ಯಕ್ಷ ಜಾವೆದ್ ಅಶ್ರಫ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಐಟಿಪಿಒ ವ್ಯವಸ್ಥಾಪಕ ನಿರ್ದೇಶಕ ನೀರಜ್ ಕರ್ವಾಲ್, ಕೆಟಿಪಿಒ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ.ಶಿವಕುಮಾರ್ ಭಾಗವಹಿಸಿದ್ದರು.






