ನಾರ್ಡಿಕ್, ತಕ್ರಾಲ್, ಜಾಪ್ಫಾ ಸಹಿತ ಹಲವು ಕಂಪೆನಿ ಜತೆ ಸಿಂಗಾಪುರದಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತುಕತೆ

ಬೆಂಗಳೂರು : ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸಲು ಸಿಂಗಾಪುರ ಪ್ರವಾಸ ಕೈಗೊಂಡಿರುವ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಗುರುವಾರ ತಕ್ರಾಲ್ ಕಾರ್ಪೋರೇಷನ್, ನಾರ್ಡಿಕ್ ಫ್ಲೊ ಕಂಟ್ರೋಲ್, ಜಾಪ್ಫಾ, ಎಸ್‍ಎಟಿಎಸ್ ಮತ್ತು ಎಸ್‍ಟಿ ಎಂಜಿನಿಯರಿಂಗ್ ಕಂಪೆನಿಗಳ ಜತೆ ಮಾತುಕತೆ ನಡೆಸಿದ್ದಾರೆ.
ಇದಕ್ಕೆ ಪೂರಕವಾಗಿ ಅಲ್ಲಿ ಸಕ್ರಿಯವಾಗಿರುವ ಸಿಂಗಪುರ್ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಪ್ರತಿನಿಧಿಗಳೊಂದಿಗೂ ಅವರು ವಿಚಾರ ವಿನಿಮಯ ನಡೆಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, ಎಸ್.ಟಿ. ಟ್ರಿಗ್ನೊಮೇಟ್ರಿ ವೈಮಾಂತರಿಕ್ಷ ಕ್ಷೇತ್ರದಲ್ಲಿ ಹೆಸರು ಮಾಡಿದ್ದು, ನಿರ್ವಹಣೆ ಮತ್ತು ದುರಸ್ತಿಯಲ್ಲಿ(ಎಂಆರ್ ಒ)ಪ್ರಪಂಚದ ದೊಡ್ಡ ಕಂಪೆನಿಯಾಗಿದೆ. ಸಂಸ್ಥೆಯು ಭಾರತದಲ್ಲಿ ನೆಲೆಯೂರಲು ಬಯಸಿದ್ದು, ರಾಜ್ಯದ ಏರೋಸ್ಪೇಸ್ ವ್ಯವಸ್ಥೆ ಮತ್ತು ನೀತಿಯನ್ನು ಮನದಟ್ಟು ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಕಾರ್ಗೋ ನಿರ್ವಹಣೆ, ಶೀತಲಗೃಹಗಳು, ಏರ್ಫೊರ್ಟ್ ಲಾಜಿಸ್ಟಿಕ್ಸ್ ಮತ್ತು ಉಗ್ರಾಣಗಳಲ್ಲಿ ಕ್ರಿಯಾಶೀಲವಾಗಿರುವ ಎಸ್‍ಎಟಿಎಸ್ ತನ್ನ ಸಾಮಥ್ರ್ಯ ವಿಸ್ತರಣೆಗೆ ಆಸಕ್ತಿ ವ್ಯಕ್ತಪಡಿಸಿದೆ. ಈ ಸಂಬಂಧ ಈಗಾಗಲೇ ಬಿಐಎಎಲ್ ಜತೆ ಚರ್ಚೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಎಸ್‍ಎಟಿಎಸ್ ನಮ್ಮಲ್ಲಿ ಸುಸಜ್ಜಿತ ತರಬೇತಿ ಅಕಾಡೆಮಿ ಸ್ಥಾಪಿಸುವ ಒಲವು ವ್ಯಕ್ತಪಡಿಸಿದೆ. ಇದರ ಮೂಲಕ ತನ್ನ ವೈಮಾನಿಕ ಮತ್ತು ಲಾಜಿಸ್ಟಿಕ್ಸ್ ಚಟುವಟಿಕೆಗಳಿಗೆ ಬೇಕಾದ ಕೌಶಲ್ಯಗಳನ್ನು ಅದು ಒದಗಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪಶು ಆಹಾರ ತಯಾರಿಕೆ ಮತ್ತು ಆಹಾರ ಸಂಸ್ಕರಣೆ ಕ್ಷೇತ್ರದ ಜಾಪ್ಫಾ ಕಂಪೆನಿಯು ರಾಜ್ಯದಲ್ಲಿ ಫೀಡ್ ಮಿಲ್ ಮತ್ತು ಆಹಾರ ಸಂಸ್ಕರಣೆ ಸ್ಥಾವರ ನಿರ್ಮಾಣಕ್ಕೆ ಆಸಕ್ತಿ ತಾಳಿದೆ. ಇದಕ್ಕೆ ರಾಜ್ಯದಲ್ಲಿ ಇರುವ ಸೂಕ್ತ ಸ್ಥಳಗಳ ಕುರಿತು ಚರ್ಚಿಸಲಾಗಿದೆ ಎಂದು ಅವರು ನುಡಿದಿದ್ದಾರೆ.
ವಾಲ್ವ್ ಮತ್ತು ಸಾಗರ ವಾಹನೋದ್ಯಮದಲ್ಲಿ ಹೆಸರಾಗಿರುವ ನಾರ್ಡಿಕ್ ಪ್ಲೊ ಕಂಟ್ರೋಲ್ ಜತೆ ರಾಜ್ಯಕ್ಕೆ ಭೇಟಿ ನೀಡಿ, ನಮ್ಮಲ್ಲಿರುವ ತಯಾರಿಕಾ ಮತ್ತು ಎಂಜಿನಿಯರಿಂಗ್ ಪರಿವ್ಯವಸ್ಥೆಯ ಅಧ್ಯಯನ ಮಾಡುವಂತೆ ಕೋರಲಾಗಿದೆ ಎಂದು ಪಾಟೀಲ್ ವಿವರಿಸಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ನೆಲೆ ಹೊಂದಿರುವ ತಕ್ರಾಲ್ ಕಾರ್ಪೊ ರೇಷನ್, ಡ್ರೋನ್ ಕ್ಷೇತ್ರದಲ್ಲಿ ಸ್ಕೈಲಾರ್ಕ್ ಡ್ರೋನ್ಸ್ ಮೂಲಕ ಮಾಡಿರುವ ಹೂಡಿಕೆ ಕುರಿತು ಮಾಹಿತಿ ಹಂಚಿಕೊಂಡಿದೆ. ಇಲ್ಲಿ ಹೆಚ್ಚಿನ ಸಹಭಾಗಿತ್ವ ಕುರಿತು ಚರ್ಚಿಸಲಾಗಿದೆ. ತಮ್ಮ ಒಂದು ಕಂಪೆನಿಯು ಕರ್ನಾಟಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಆಸಕ್ತಿ ಹೊಂದಿರುವ ವಿಚಾರವನ್ನು ಗಮನಕ್ಕೆ ತಂದಿದೆ ಎಂದು ಅವರು ನುಡಿದಿದ್ದಾರೆ.
ಮಾತುಕತೆಯಲ್ಲಿ ತಕ್ರಾಲ್ ಕಂಪೆನಿಯ ಸತ್ಬೀರ್ ಸಿಂಗ್ ಮತ್ತು ಸತ್ಪಾಲ್ ಸಿಂಗ್, ನಾರ್ಡಿಕ್ ಸಮೂಹದ ಡೋರ್ಕಾಸ್ ಟಿಯೊ, ಜಾಪ್ಫಾ ಪ್ರತಿನಿಧಿಗಳಾದ ಬಿಲ್ಲಿ ಥಾಮ್, ಸಿಂಥಾ ಲಿಮ್, ಎಸ್‍ಎಟಿಎಸ್ ಸಿಇಒ ಬಾಬ್ ಚೀ, ವೆಂಡಿ ಲೋ, ಯಿನ್ ಫನ್ ಥಿಮ್, ಎಸ್‍ಟಿ ಎಂಜಿನಿಯರಿಂಗ್ ಪರವಾಗಿ ಅದರ ಮುಖ್ಯಸ್ಥ ಕೆವಿನ್ ಚೌ ಮಾತುಕತೆಗಳಲ್ಲಿ ಭಾಗವಹಿಸಿದ್ದರು. ರಾಜ್ಯ ಸರಕಾರದ ನಿಯೋಗದಲ್ಲಿ ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.






