ದ್ವಿಪಕ್ಷೀಯ ವಾಣಿಜ್ಯ ಬಲವರ್ಧನೆ: ಸಿಂಗಾಪುರ ಜತೆ ಸಚಿವ ಎಂ.ಬಿ.ಪಾಟೀಲ್ ಮಾತುಕತೆ

ಬೆಂಗಳೂರು : ಏರೋಸ್ಪೇಸ್, ರಕ್ಷಣೆ, ಸೆಮಿಕಂಡಕ್ಟರ್ಸ್, ವಿಮಾನ ನಿರ್ವಹಣೆ ಮತ್ತು ದುರಸ್ತಿ (ಎಂ.ಆರ್.ಒ) ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಲವರ್ಧನೆ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ಎಂಟಪ್ರ್ರೈಸ್ ಸಿಂಗಾಪುರ್ ಮುಖ್ಯಸ್ಥ ಲೀ ಚುವಾನ್ ಟೆಕ್ ಮಂಗಳವಾರ ನಗರದಲ್ಲಿ ವಿಸ್ತೃತ ಚರ್ಚೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎಂ.ಬಿ.ಪಾಟೀಲ್, ಕರ್ನಾಟಕ ಮತ್ತು ಸಿಂಗಾಪುರ ಎರಡಕ್ಕೂ ಪರಸ್ಪರ ಲಾಭದಾಯಕವಾಗಿರುವ ಕ್ಷೇತ್ರಗಳನ್ನು ಕುರಿತು ಮಾತುಕತೆ ನಡೆಯಿತು. ವಾಣಿಜ್ಯ, ತಂತ್ರಜ್ಞಾನ ಮತ್ತು ಬಂಡವಾಳ ಹೂಡಿಕೆ ವಲಯಗಳಲ್ಲಿ ಇರುವ ಅವಕಾಶಗಳನ್ನು ಆದ್ಯತೆಯ ಮೇಲೆ ನಾವು ಚರ್ಚಿಸಿದ್ದೇವೆ ಎಂದಿದ್ದಾರೆ.
ಮುಖ್ಯವಾಗಿ ಇನ್ವೆಸ್ಟ್ ಕರ್ನಾಟಕ ಫೋರಂ ಮತ್ತು ಬೆಂಗಳೂರಿನಲ್ಲೆ ಕಚೇರಿ ಹೊಂದಿರುವ ಎಂಟಪ್ರ್ರೈಸ್ ಸಿಂಗಾಪುರ್ ನಡುವೆ ಸಹಭಾಗಿತ್ವ ಹೆಚ್ಚಿಸುವ ಕುರಿತು ಒಮ್ಮತಕ್ಕೆ ಬರಲಾಗಿದೆ. ನಮ್ಮ ಕೈಗಾರಿಕಾ ನೀತಿ ಮತ್ತು ಇಲ್ಲಿನ ಔದ್ಯಮಿಕ ಕಾರ್ಯಪರಿಸರವನ್ನು ಲೀ ಅವರಿಗೆ ವಿವರಿಸಲಾಗಿದೆ. ಇತ್ತೀಚೆಗೆ ಕೈಗೊಂಡಿದ್ದ ಸಿಂಗಾಪುರ್ ಪ್ರವಾಸದಲ್ಲಿ ಹತ್ತಾರು ಕಂಪನಿಗಳ ಜತೆ ನಡೆಸಿದ ಹೂಡಿಕೆ ಮಾತುಕತೆಯ ಫಲಿತಾಂಶಗಳನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ ಎಂದು ಅವರು ನುಡಿದಿದ್ದಾರೆ.
ಮಾತುಕತೆಯ ಸಂದರ್ಭದಲ್ಲಿ, 2027ರಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಿಂಗಾಪುರದ ಪ್ರತಿನಿಧಿಗಳನ್ನು ಆಹ್ವಾನಿಸಲಾಯಿತು ಎಂದು ಎಂ.ಬಿ.ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






