ರಾಜ್ಯಕ್ಕೆ ಡಿಫೆನ್ಸ್ ಕಾರಿಡಾರ್ ಕೊಡುವಂತೆ ರಕ್ಷಣಾ ಸಚಿವರಿಗೆ ಆಗ್ರಹ : ಎಂ.ಬಿ.ಪಾಟೀಲ್

ಬೆಂಗಳೂರು : ಸದ್ಯದಲ್ಲೇ ತಾವು ದಿಲ್ಲಿಗೆ ಹೋಗುತ್ತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಸಿಗಬೇಕಾಗಿರುವ ಡಿಫೆನ್ಸ್ ಕಾರಿಡಾರ್ ಕೊಡುವಂತೆ ಆಗ್ರಹಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ನೀತಿ ಆಯೋಗದ ಸಭೆಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಗಳೂರಿನಲ್ಲಿರುವ ಎಚ್‍ಎಎಲ್ ಕಾರ್ಖಾನೆಯನ್ನು ತಮ್ಮ ರಾಜ್ಯಕ್ಕೆ ಸ್ಥಳಾಂತರಿಸುವಂತೆ ಕೋರಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ ಎಂದು ಹೇಳಿದರು.
ನಾಯ್ಡು ಅವರು ಈ ವ್ಯವಸ್ಥೆಯನ್ನು ಚೆನ್ನಾಗಿ ಬಲ್ಲವರು. ಅವರು ತಮ್ಮಲ್ಲೂ ಎಚ್‍ಎಎಲ್ ಘಟಕ ಸ್ಥಾಪನೆಗೆ ಕೇಳಿರಬಹುದು. ಅದರಲ್ಲಿ ತಪ್ಪೇನೂ ಇಲ್ಲ. ಒಂದು ವೇಳೆ ಅವರು ಎಚ್‍ಎಎಲ್ ಸ್ಥಳಾಂತರಕ್ಕೆ ಕೇಳಿದ್ದರೆ ಅದು ಸರಿಯಲ್ಲ ಎಂದು ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟರು.
ಕೇಂದ್ರ ಸರಕಾರವು ಎರಡು ವರ್ಷಗಳ ಹಿಂದೆ ಉತ್ತರಪ್ರದೇಶ ಮತ್ತು ತಮಿಳುನಾಡಿಗೆ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡಿತು. ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ರಕ್ಷಣಾ ವಹಿವಾಟಿನಲ್ಲಿ ದೇಶಕ್ಕೆ ಶೇ.65ರಷ್ಟು ಕೊಡುಗೆ ನೀಡುತ್ತಿರುವ ಮತ್ತು ಜಾಗತಿಕವಾಗಿ ತೃತೀಯ ಸ್ಥಾನದಲ್ಲಿ ಇರುವ ನಮ್ಮ ರಾಜ್ಯಕ್ಕೆ ಆ ಯೋಜನೆಯನ್ನು ಘೋಷಿಸದೆ ಇದ್ದುದು ಸರಿಯಲ್ಲ ಎಂದು ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಚಂದ್ರಬಾಬು ನಾಯ್ಡು ತಮ್ಮಲ್ಲಿ ಉದ್ದಿಮೆ ಬೆಳೆಸಲು ಲೇಪಾಕ್ಷಿಯಲ್ಲಾದರೂ ಜಮೀನು ಕೊಡಲಿ, ಮಡಕಶಿರಾದಲ್ಲಾದರೂ ಭೂಮಿ ಕೊಡಲಿ, ಅದು ಅವರಿಗೆ ಬಿಟ್ಟಿದ್ದು. ಆದರೆ ನಮ್ಮಲ್ಲಿರುವ ಉದ್ಯಮಗಳನ್ನು ಎಳೆದುಕೊಂಡು ಹೋಗುವ ಆಲೋಚನೆಯನ್ನು ಅವರು ಮಾಡಿರಲಾರರು ಎಂದು ಭಾವಿಸಿರುವೆ ಎಂದು ಅವರು ಹೇಳಿದರು.







