ಕಿರಣ್ ಮಂಜುದಾರ್ ಪದೇ ಪದೇ ಮಾತನಾಡುವ ಉದ್ದೇಶವೇನು?: ಎಂ.ಬಿ.ಪಾಟೀಲ್

ಕಿರಣ್ ಮಜುಂದಾರ್
ಬೆಂಗಳೂರು, ಅ.14 : ‘ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಅವರು ಪದೇ ಪದೇ ಮಾತನಾಡುವ ಉದ್ದೇಶವಾದರೂ ಏನು?’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಮಜುಂದಾರ್ ಬೆಂಗಳೂರಿಗೆ ಕೊಡುಗೆ ನೀಡಿದ್ದಾರೆ. ಅದೇ ರೀತಿಯಲ್ಲಿ ಬೆಂಗಳೂರೂ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಮಳೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಲವು ರಸ್ತೆಗಳು ಹಾನಿಗೆ ಒಳಗಾಗಿವೆ. ಈಗಾಗಲೇ ಸಿಎಂಗೆ ನಾವು ಮನವಿ ಮಾಡಿದ್ದು, ಮೂಲಸೌಕರ್ಯ ಕಲ್ಪಿಸುವ ಸಂಬಂಧ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕಿದೆ’ ಎಂದರು.
ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದು, ಈ ಕಾರ್ಯಕ್ಕಾಗಿ 1ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ. ಹೀಗಾಘಿ ಗುಂಡಿ ಮುಚ್ಚಲು ಸ್ವಲ್ಪ ಸಮಯವು ಬೇಕು. ಬೆಂಗಳೂರಿಗೆ ಬೇರೆ ಕಡೆಗಳಿಂದ ಸಾಕಷ್ಟು ಮಂದಿ ಬಂದು ನೆಲೆಸಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡ್ತಿದ್ದೇವೆ ಎಂದು ಅವರು ತಿಳಿಸಿದರು.
ಮೋಹನ್ ದಾಸ್ ಪೈಗೂ ಕರ್ನಾಟಕ ಎಲ್ಲವನ್ನೂ ಕೊಟ್ಟಿದೆ. ಬೇರೆ ರಾಜ್ಯಗಳ ಮಂತ್ರಿಗಳು ಈ ಕಡೆ ಬನ್ನಿ ಎಂದರೆ ಯಾರು ಹೋಗ್ತಾರೆ?. ಇನ್ನೂ ಬೇರೆ ಕಡೆಗಳಿಂದಲೇ ಈ ಕಡೆ ಉದ್ಯಮಿಗಳು ಬರುತ್ತಾರೆ. ರಾಜ್ಯದಿಂದ ಯಾರೂ ಹೊರಗೆ ಹೋಗುವುದಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗಿ ಏನು ಕೆಲಸ ಮಾಡಿದ್ದರು?. ಮಳೆಗಾಲದಲ್ಲಿ ಟಾರ್ ಹಾಕಲು ಸಾಧ್ಯವಿಲ್ಲ. ಹೀಗಾಗಿ ಗುಂಡಿ ಮುಚ್ಚುತ್ತಿದ್ದೇವೆ ಎಂದು ವಿವರಿಸಿದರು.
ಹೈಕಮಾಂಡ್ ತೀರ್ಮಾನವೇ ಅಂತಿಮ: ‘ಹೈಕಮಾಂಡ್ ತೀರ್ಮಾನವೇ ಅಂತಿಮ. ವೀಕ್ಷಕರನ್ನು ಕಳುಹಿಸಿ ಅಭಿಪ್ರಾಯ ಕೇಳಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಇದೇ ನಮ್ಮ ಪಕ್ಷದ ಪದ್ಧತಿ’ ಎಂದ ಅವರು, ಬಿಜೆಪಿಯವರು ಮೊದಲು ತಮ್ಮ ಮನೆ ಬಾಗಿಲನ್ನು ನೋಡಿಕೊಳ್ಳಲಿ. ನಮ್ಮ ಪಕ್ಷದಲ್ಲಿ ಯಾವ ಕ್ರಾಂತಿಯೂ ಇಲ್ಲ. ಸಿಎಂ ಊಟಕ್ಕೆ ಕರೆದಿದ್ದರೂ, ಊಟ ಮಾಡಿ ಬಂದೆವು ಅಷ್ಟೇ ಎಂದರು.







