ಕಬ್ಬಿನ ದರ ನಿಗದಿ ಕೇಂದ್ರದ ಜವಾಬ್ದಾರಿ : ಸಚಿವ ಎಂ.ಬಿ.ಪಾಟೀಲ್

ವಿಜಯಪುರ : ಕಬ್ಬಿನ ದರ ನಿಗದಿ ಮಾಡುವ ಜವಾಬ್ದಾರಿ ಕೇಂದ್ರ ಸರಕಾರದ್ದು, ಆದರೆ ಬಿಜೆಪಿಯವರು ರಾಜ್ಯ ಸರಕಾರದ ವಿರುದ್ಧ ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ರಾಜ್ಯ ಸರಕಾರದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿನ ದರ ನಿಗದಿ ಮಾಡುವ ಜವಾಬ್ದಾರಿ ಕೇಂದ್ರ ಸರಕಾರ ಇದೆ. ಆದರೆ, ವಿಜಯೇಂದ್ರ ರೈತರ ಧರಣಿ ಸ್ಥಳಕ್ಕೆ ಹೋಗಿ, ಅಲ್ಲಿ ವಾಸ್ತವ್ಯ ಮಾಡುವ ನಾಟಕವಾಡುವುದನ್ನು ಬಿಟ್ಟು ರೈತಪರ ನಿಜವಾಗಿಯೇ ಕಾಳಜಿ ಇದ್ದರೆ, ಪ್ರಧಾನಿ ಭೇಟಿ ಮಾಡಲು ಸಮಯಾವಕಾಶ ಕೊಡಿಸಲಿ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ್, ನಾನು ಸೇರಿದಂತೆ ನಿಯೋಗ ತೆಗೆದುಕೊಂಡು ಪ್ರಧಾನಿಗಳ ಬಳಿ ಹೋಗಿ ಎಂ.ಎಸ್.ಪಿ ಹಾಗೂ ಎಫ್.ಆರ್.ಪಿ ದರ ಕಡಿಮೆ ಇದೆ. ನಾವು ಪ್ರಧಾನಿಗಳ ಜೊತೆಗೆ ಮಾತನಾಡುತ್ತೇವೆ. ಅದನ್ನು ಬಿಟ್ಟು ರೈತರನ್ನು ಎತ್ತಿ ಕಟ್ಟುತ್ತಿರುವುದು ಯಾಕೆ ? ಎಂದು ಪ್ರಶ್ನಿಸಿದರು.
ಸದ್ಯ ಕಬ್ಬು ಬೆಳೆಗಾರರ ಹೋರಾಟಕ್ಕೆ ನಮ್ಮ ಸರಕಾರ ಸ್ಪಂದನೆ ನೀಡಿ 3,300 ರೂಪಾಯಿ ದರ ನಿಗದಿ ಮಾಡಿದೆ. ವಿಜಯಪುರ ಹಾಗೂ ಬಾಗಲಕೋಟನಲ್ಲಿ ಸ್ವಲ್ಪ ರೈತರ ಸಮಸ್ಯೆಗಳಿವೆ ಅವರು ಇನ್ನೂ ಪೂರ್ಣ ಪ್ರಮಾಣದಲ್ಲಿ ಒಪ್ಪಿಗೆ ಸೂಚಿಸಿಲ್ಲ. ಅವರನ್ನು ಕೂಡಾ ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಥಿನಾಲ್ ಖರೀದಿ ಕುರಿತು ಮಾಧ್ಯಮಗಳ ಮುಂದೆ ರೈತರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಜೋಶಿ ಅವರೇ ಸದನದಲ್ಲಿ ಮಾಹಿತಿ ನೀಡಿರುವ ಪ್ರತಿ ನನ್ನ ಬಳಿ ಇದೆ. ರೈತರ ವಿಷಯದಲ್ಲಿ ಬಿಜೆಪಿ ರಾಜಕೀಯ ಸಲ್ಲದು ಎಂದು ಸಚಿವ ಎಂ.ಬಿ.ಪಾಟೀಲ್ ಗರಂ ಆದರು.







