ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿ 100 ಎಕರೆ ಭೂಮಿ ಇದೆ ಎನ್ನುವ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ್ ವಿಷಾದ

ಬೆಂಗಳೂರು : ಬಿಡದಿ ಟೌನ್‍ಶಿಪ್ ಭೂಸ್ವಾಧೀನ ವಿಚಾರ ದಿನೇ ದಿನೇ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ನಡುವೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿ 100 ಎಕರೆ ಭೂಮಿ ಇದೆ ಎನ್ನುವ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ್ ವಿಷಾದ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸ್ವತಃ ಎಚ್.ಡಿ.ಕುಮಾರಸ್ವಾಮಿ ಅವರೇ ತಮ್ಮ ಪತ್ನಿಯ ಹೆಸರಿನಲ್ಲಿ ಬಿಡದಿಯಲ್ಲಿ ಜಮೀನಿದೆ ಎಂದು ಹೇಳಿದ್ದರು. ಬಿಡದಿಯಲ್ಲಿ ಅನಿತಾ ಅವರು 100 ಎಕರೆ ಜಮೀನು ತೆಗೆದುಕೊಂಡಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿತ್ತು. ಒಂದು ವೇಳೆ ಅಲ್ಲಿ ಅಷ್ಟು ಜಮೀನು ಇಲ್ಲದಿದ್ದರೆ ಅವರು ಆಗಲೇ ಸ್ಪಷ್ಟೀಕರಣ ನೀಡಬೇಕಿತ್ತು. ನಮ್ಮ ಭೂಮಿ ಇಲ್ಲ ಎಂದು ಹೇಳಿದರೆ ಇಲ್ಲಿಗೆ ಮುಗಿಯಿತು. ಅನಿತಾ ಕುಮಾರಸ್ವಾಮಿ ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅವರು ನಮಗೆ ಸಹೋದರಿ ಇದ್ದಂತೆ. ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
ಮಾನನಷ್ಟ ಮೊಕದ್ದಮೆ: ಇನ್ನೊಂದೆಡೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈ ಕುರಿತು ಪ್ರತಿಕ್ರಿಯಿಸಿ, ನಮ್ಮ ತಾಯಿಯವರ ಹೆಸರಿನಲ್ಲಿ ಆ ಪ್ರದೇಶದಲ್ಲಿ 100 ಎಕರೆ ಜಾಗ ಇದೆ ಎಂದು ಸಾಬೀತುಪಡಿಸಬೇಕು. ಒಂದು ವೇಳೆ ಸಾಬೀತುಪಡಿಸಲು ಆಗದಿದ್ದರೆ ಅವರು ತಕ್ಷಣ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅನಿತಾ ಕುಮಾರಸ್ವಾಮಿ ಸಹ ವಿವಾದ ಕುರಿತು ಪ್ರತಿಕ್ರಿಯಿಸಿ, ನನ್ನ ಹೆಸರಿನಲ್ಲಿ ಬಿಡದಿಯಲ್ಲಿ ಇರುವುದು ಕೇವಲ 32 ಎಕರೆ ಜಮೀನು. ಸಚಿವರು ಹೇಳುತ್ತಿರುವಂತೆ 100 ಎಕರೆ ಅಲ್ಲ. ರಾಜಕೀಯ ದುರುದ್ದೇಶಕ್ಕಾಗಿ ಮನೆಯವರನ್ನು ಮತ್ತು ಮಹಿಳೆಯರನ್ನು ಎಳೆದು ತಂದು ಸುಳ್ಳು ಪ್ರಚಾರ ಮಾಡುವುದು ಯಾರಿಗೂ ಒಳ್ಳೆಯದಲ್ಲ. ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸುವ ಕೀಳು ಮಟ್ಟಕ್ಕೆ ಯಾರೂ ಹೋಗಬಾರದು. ಅನಗತ್ಯವಾಗಿ ನನ್ನ ಹಾಗೂ ನನ್ನ ಕುಟುಂಬದ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಕಾನೂನಿನ ಮೂಲಕವೇ ತಕ್ಕ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.






