‘ಅನುಷ್ಠಾನಕ್ಕೆ ಬಂದ ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ’ | ರಾಜ್ಯದ ಕಾಫಿ, ಸಾಂಬಾರ ಪದಾರ್ಥ, ಜವಳಿ, ಫಾರ್ಮಾ ವಲಯಗಳಿಗೆ ಲಾಭ : ಎಂ.ಬಿ.ಪಾಟೀಲ್

ಬೆಂಗಳೂರು : ಭಾರತ ಮತ್ತು ಯುನೈಟೆಡ್ ಕಿಂಗ್‍ಡಮ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಬುಧವಾರದಿಂದ ಅನುಷ್ಠಾನಕ್ಕೆ ಬಂದಿದೆ. ಇದರಿಂದ ರಾಜ್ಯದ ಜೈವಿಕ ತಂತ್ರಜ್ಞಾನ, ಫಾರ್ಮಸುಟಿಕಲ್ಸ್, ಜವಳಿ ಮತ್ತು ಗಾರ್ಮೆಂಟ್ಸ್, ಸಮುದ್ರ ಉತ್ಪನ್ನಗಳು, ಎಂಜಿನಿಯರಿಂಗ್ ಉತ್ಪನ್ನಗಳು ಮತ್ತು ಮಷಿನರಿ, ಚಿಕ್ಕಮಗಳೂರು ಮತ್ತು ಕೊಡಗಿನ ಉತ್ಕೃಷ್ಟ ಕಾಫಿ ಹಾಗೂ ಸಾಂಬಾರ ಪದಾರ್ಥಗಳ ವಲಯಕ್ಕೆ ಭಾರೀ ಲಾಭವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ‘ಭಾರತ-ಯು.ಕೆ. ನಡುವಿನ ಚಾರಿತ್ರಿಕ ಒಪ್ಪಂದ’ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಉದ್ದಿಮೆದಾರರಿಗೆ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಮಾತನಾಡಿದ ಅವರು, ಉದ್ಯಮಿಗಳು ಈ ಸದಾವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು, ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಹೆಗಲು ಕೊಡಬೇಕು ಎಂದು ತಿಳಿಸಿದ್ದಾರೆ.
ಈ ಒಪ್ಪಂದದಿಂದಾಗಿ ಭಾರತದ ಶೇ.99ರಷ್ಟು ಉತ್ಪನ್ನಗಳು ಸುಂಕರಹಿತವಾಗಿ ಬ್ರಿಟನ್ ಮಾರುಕಟ್ಟೆ ಪ್ರವೇಶಿಸಲಿವೆ. ರಾಜ್ಯವು ಮುಂಚೂಣಿಯಲ್ಲಿರುವ ಎಲ್ಲ ವಲಯಗಳೂ ಈ ಒಪ್ಪಂದದ ವ್ಯಾಪ್ತಿಯಲ್ಲಿವೆ. ಆದುದರಿಂದ, ನಾವು ಯುನೈಟೆಡ್ ಕಿಂಗ್ಡಮ್ ನ ವಿಶ್ವವಿದ್ಯಾಲಯಗಳು ಮತ್ತು ನಮ್ಮಲ್ಲಿನ ಉದ್ಯಮಗಳ ನಡುವೆ ಹೆಚ್ಚು ಹೆಚ್ಚು ಸಹಭಾಗಿತ್ವಕ್ಕೆ ಮುಂದಾಗಲಿದ್ದೇವೆ. ಇದರಿಂದ ಕೌಶಲ್ಯಾಭಿವೃದ್ಧಿ, ಸಂಶೋಧನೆ ಮತ್ತು ಜಂಟಿ ನಾವೀನ್ಯತೆಗೆ ಪ್ರೋತ್ಸಾಹ ಸಿಗಲಿದೆ. ಅಲ್ಲಿಂದ ನಮ್ಮಲ್ಲಿಗೆ ಬರುವ ಶೇ.90ರಷ್ಟು ಉತ್ಪನ್ನಗಳಿಗೂ ಯಾವುದೇ ಸುಂಕ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಒಪ್ಪಂದದ ವ್ಯಾಪ್ತಿಯಲ್ಲಿ ಬರುವ ಮೋಡ್-1 ಸೇವೆಯಿಂದ ಬೆಂಗಳೂರು ಕೇಂದ್ರಿತ ಐಟಿ ಉದ್ಯಮಕ್ಕೆ ಭಾರೀ ಲಾಭ ಸಿಗಲಿದೆ. ಮುಂದಿನ ದಿನಗಳಲ್ಲಿ ಬ್ರಿಟನ್ನಿನ ಹಲವು ಕಂಪನಿಗಳು ಬೆಂಗಳೂರು ಮತ್ತು ಮೈಸೂರಿನಲ್ಲಿ ತಮ್ಮ ಜಿಸಿಸಿ ಕೇಂದ್ರಗಳನ್ನು ಸ್ಥಾಪಿಸಲಿವೆ. ಏರೋಸ್ಪೇಸ್ ವಲಯದಲ್ಲಿ ಬೆಂಗಳೂರು ನಗರದ ಜತೆಗೆ ಬೆಳಗಾವಿಗೆ ಪ್ರಯೋಜನವಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಮುಕ್ತ ವ್ಯಾಪಾರ ಒಪ್ಪಂದದಿಂದ ನಮ್ಮ ಏರೋಸ್ಪೇಸ್ ಉತ್ಪನ್ನಗಳ ಮೇಲಿನ ಸುಂಕವು ಶೇ.11ರಿಂದ ಸೊನ್ನೆಗೆ, ಆಟೋಮೋಟಿವ್ ಮೇಲಿನ ಸುಂಕವು ಶೇ.110ರಿಂದ ಸೊನ್ನೆಗೆ, ಎಲೆಕ್ಟ್ರಿಕಲ್ ಮಷಿನರಿ ಮೇಲಿನ ಸುಂಕ ಶೇ.22ರಿಂದ ಸೊನ್ನೆಗೆ ಮತ್ತು ವೈದ್ಯಕೀಯ ಉಪಕರಣಗಳ ಮೇಲಿನ ಸುಂಕವು ಶೇ.13.75ರಿಂದ ಸೊನ್ನೆಗೆ ಇಳಿಯಲಿದೆ. ಇನ್ನು ಕೆಲವು ಉತ್ಪನ್ನಗಳ ಮೇಲಿನ ಸುಂಕವು 5-6 ವರ್ಷಗಳಲ್ಲಿ ಸೊನ್ನೆಗೆ ಬರಲಿದೆ ಎಂದು ಅವರು ವಿವರಿಸಿದ್ದಾರೆ.
ಇದಲ್ಲದೆ ಎಣ್ಣೆಬೀಜಗಳು, ಕಾಳುಮೆಣಸು, ಏಲಕ್ಕಿ, ಬ್ಯಾಡಗಿ ಮತ್ತು ದೇವನೂರು ಮೆಣಸಿನಕಾಯಿ ಮುಂತಾದ ಸಾಂಬಾರ ಪದಾರ್ಥಗಳು, ಸಿರಿಧಾನ್ಯಗಳು, ಹೂವು, ಹಣ್ಣು, ತರಕಾರಿ, ಮೀನು, ತೆಂಗು, ಮಾವು, ನಿಂಬೆ, ಮಲ್ಲಿಗೆ, ಚೆಂಡುಹೂವು, ಕೊಡಗು ಮತ್ತು ಚಿಕ್ಕಮಗಳೂರಿನ ಉತ್ಕೃಷ್ಟ ಕಾಫಿ, ಹಾಸನ, ಬೀದರ್ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ತಯಾರಾಗುವ ಸಂಸ್ಕರಿತ ಕೃಷಿ ಮತ್ತು ಆಹಾರ ಉತ್ಪನ್ನಗಳ ರಫ್ತಿಗೆ ಇನ್ನು ಮುಂದೆ ಬ್ರಿಟನ್ ಮಾರುಕಟ್ಟೆಯಲ್ಲಿ ಸುಂಕದ ಹೊರೆ ಇರುವುದಿಲ್ಲ ಎಂದು ಎಂ.ಬಿ.ಪಾಟೀಲ್ ನುಡಿದಿದ್ದಾರೆ.
ಸಣ್ಣ ಕೈಗಾರಿಕೆಗಳಿಗೂ ಈ ಒಪ್ಪಂದದಿಂದ ಲಾಭವಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ಕಾಫಿ ಬೆಳೆಗಾರರು, ಗಾರ್ಮೆಂಟ್ಸ್ ಮಾಲೀಕರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಫ್ತುದಾರರಿಗೆ ಹೆಚ್ಚಿನ ತಿಳಿವಳಿಕೆ ಮೂಡಿಸಲು ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯವು ಏರೋಸ್ಪೇಸ್, ರಕ್ಷಣೆ, ಆಧುನಿಕ ತಯಾರಿಕ, ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರ, ಶುದ್ಧ ಇಂಧನ, ಸೆಮಿಕಂಡಕ್ಟರ್, ಡೀಪ್-ಟೆಕ್ ಮತ್ತು ಜಿಸಿಸಿ ಕ್ಷೇತ್ರಗಳಲ್ಲೂ ಬ್ರಿಟನ್ ಜತೆ ಸಹಭಾಗಿತ್ವದ ಉಪಕ್ರಮಗಳನ್ನು ತೆಗೆದುಕೊಳ್ಳಲಿದೆ. ಬ್ರಿಟನ್ನಿನ ಹೂಡಿಕೆದಾರರನ್ನು ಸೆಳೆಯಲು ಅಲ್ಲಿಗೆ ಹೋಗಿ ರೋಡ್ ಶೋಗಳನ್ನು ನಡೆಸಲಾಗುವುದು ಎಂದು ಎಂ.ಬಿ.ಪಾಟೀಲ್ ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಈಗಾಗಲೇ ಬ್ರಿಟನ್ ಮೂಲದ ರೋಲ್ಸ್ ರಾಯ್ಸ್, ಬಿಎಇ ಸಿಸ್ಟಮ್ಸ್, ಟೆಸ್ಕೊ, ಎಆರ್‍ಎಂ, ಎಚ್‍ಎಸ್‍ಬಿಸಿ ಮುಂತಾದ ಕಂಪನಿಗಳು ನೆಲೆಯೂರಿವೆ. ಇವುಗಳಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಉದ್ಯೋಗಿಗಳಿದ್ದಾರೆ. ಟೆಸ್ಕೊ ಕಂಪನಿಯು ತನ್ನ ಹೊಸ ವಿಸ್ತರಣಾ ಕೇಂದ್ರವನ್ನು ತೆರೆಯುತ್ತಿದ್ದು, ಅಲ್ಲಿ 15 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ರೋಲ್ಸ್ ರಾಯ್ಸ್ ಕೂಡ ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ಸುಕವಾಗಿದೆ. ಈಗಿನ ಮುಕ್ತ ವ್ಯಾಪಾರ ಒಪ್ಪಂದವು ಇವುಗಳಿಗೆ ವೇಗವರ್ಧಕವಾಗಿ ಕೆಲಸ ಮಾಡಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಮಾತನಾಡಿ, ಬ್ರಿಟನ್ನಿನ ಲಿವರ್‍ಪೂಲ್, ಲ್ಯಾಂಕಾಸ್ಟೈರ್, ಬರ್ಕ್ ಬೆಕ್, ಇಂಪೀರಿಯಲ್ ಕಾಲೇಜು ವಿ.ವಿ.ಗಳು ರಾಜ್ಯದಲ್ಲಿ ತಮ್ಮ ಕ್ಯಾಂಪಸ್ ಆರಂಭಿಸಲಿವೆ. ಜತೆಗೆ ಕಿಂಗ್ಸ್ ಕ್ಯಾಂಟರಬರಿ ಮತ್ತು ಆರ್.ಜಿ.ಎಸ್ ಗಿಲ್ಡ್ ಫೋರ್ಡ್ ಶಾಲೆಗಳು ಕೂಡ ಇಲ್ಲಿ ಆರಂಭವಾಗಲಿವೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿದೇಶಾಂಗ ವಾಣಿಜ್ಯ ವ್ಯವಹಾರಗಳ ಜಂಟಿ ಮಹಾನಿರ್ದೇಶಕಿ ಡೋನಾ ಘೋಷ್ ಮತ್ತು ಕಸ್ಟಮ್ಸ್ ಇಲಾಖೆಯ ಆಯುಕ್ತೆ ಸುಚೇತಾ ಶ್ರೀಜೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜ್ಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯೆಲ್ ಚೌಧರಿ ಮುಂತಾದವರು ಉಪಸ್ಥಿತರಿದ್ದರು.






