ಸಿಲ್ಕ್ ಬೋರ್ಡ್ ಜಂಕ್ಷನ್ ಸಮಗ್ರ ಅಭಿವೃದ್ಧಿಗೆ ಕ್ರಮ : ಸಚಿವ ಕೃಷ್ಣ ಬೈರೇಗೌಡ
ಪಿಲ್ಲರ್ಗಳಿಗೆ ಬಣ್ಣ ಬಳಿಯುವ ಮೂಲಕ ‘ವಾರ್ಡ್ ಒನ್’ ಅಭಿಯಾನಕ್ಕೆ ಚಾಲನೆ

ಕೃಷ್ಣ ಬೈರೇಗೌಡ
ಬೆಂಗಳೂರು : ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಶಾಶ್ವತ ಯೋಜನೆ ರೂಪಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 43 ವಾರ್ಡ್ಗಳಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ‘ವಾರ್ಡ್ ಒನ್’ ಅಭಿಯಾನದ ಅಂಗವಾಗಿ, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಶನಿವಾರ ಪಿಲ್ಲರ್ ಗಳಿಗೆ ಬಣ್ಣ ಬಳಿಯುವ ಮೂಲಕ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ಈ ಜಂಕ್ಷನ್ನಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಸಂಚರಿಸುತ್ತಾರೆ. ಇಲ್ಲಿ ಮೇಲ್ಸೇತುವೆ, ಮೆಟ್ರೋ, ಎಲೆಕ್ಟ್ರಾನಿಕ್ ಸಿಟಿ ಮಾರ್ಗ, ಔಟರ್ ರಿಂಗ್ ರೋಡ್ ಹಾಗೂ ಎನ್ಎಚ್ಎಐ ಎಲಿವೇಟೆಡ್ ರಸ್ತೆ ಸೇರಿದಂತೆ ಹಲವು ಪ್ರಮುಖ ಮೂಲಸೌಕರ್ಯ ಯೋಜನೆಗಳಿವೆ. ಇದರೊಂದಿಗೆ ಮೆಟ್ರೋ ಹಾಗೂ ರಾಜಕಾಲುವೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಭಾಗದಲ್ಲಿದ್ದ ಬಹುತೇಕ ಸಮಸ್ಯೆಗಳನ್ನು ಈಗಾಗಲೇ ಬಗೆಹರಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಈಗಾಗಲೇ ಪಾಲಿಕೆ ಹಾಗೂ ಸ್ವಯಂಸೇವಾ ಸಂಸ್ಥೆಗಳು ಒಟ್ಟಾಗಿ ಹಲವು ಸುಧಾರಣಾ ಕಾರ್ಯಗಳನ್ನು ಕೈಗೊಂಡಿವೆ. ಇದೀಗ ವಾರ್ಡ್ ಒನ್ ಅಭಿಯಾನದಡಿ ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಜಂಕ್ಷನ್ಗಳಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಸೌಂದರ್ಯೀಕರಣಕ್ಕೂ ಕ್ರಮ ಕೈಗೊಳ್ಳಲಾಗುವುದು. ಮೇಲ್ಸೇತುವೆಗಳ ಕೆಳಭಾಗದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು, ಸುಂದರವಾಗಿ ಅಭಿವೃದ್ಧಿಪಡಿಸಿ, ನಾಗರಿಕರು ವಿಶ್ರಾಂತಿ ಪಡೆಯಲು ಆಸನ ಹಾಗೂ ಆಟವಾಡಲು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ರಾಜಕಾಲುವೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಐಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿ ಯೋಜನೆ ರೂಪಿಸಿ, ನಾಗರಿಕರು ಕುಳಿತು ವಿಶ್ರಾಂತಿ ಪಡೆಯಲು ಆಸನ ಹಾಗೂ ನೆರಳಿನ ವ್ಯವಸ್ಥೆ ಕಲ್ಪಿಸುವ ಮೂಲಕ ಜಾಗವನ್ನು ಸುಂದರಗೊಳಿಸಬೇಕು. ಅಲ್ಲದೆ, ಮಣ್ಣಿರುವ ಕೆಲವು ಭಾಗಗಳಲ್ಲಿ ಕಾಂಕ್ರೀಟ್ ಅಳವಡಿಸಿ ಸ್ವಚ್ಛತೆ ಕಾಪಾಡಬೇಕು ಎಂದು ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದರು.
ಜಂಕ್ಷನ್ ಭಾಗದಲ್ಲಿ 60 ಮೀಟರ್ ಉದ್ದದ ಬೃಹತ್ ನೀರುಗಾಲುವೆ ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರತಿ 2 ಮೀಟರ್ ಗೆ ಒಂದರಂತೆ ಒಟ್ಟು 30 ಗರ್ಡರ್ ಗಳನ್ನು ಅಳವಡಿಸಲಾಗುವುದು. ಆರ್ ಸಿಸಿ ತಡೆಗೋಡೆ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ, ಗರ್ಡರ್ ಗಳನ್ನು ಅಳವಡಿಸುವ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆ ಹಾಗೂ ಸ್ವಯಂಸೇವಾ ಸಂಸ್ಥೆಗಳು ಜಂಟಿಯಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ನ ಮೇಲ್ಸೇತುವೆ ಕೆಳಭಾಗದಲ್ಲಿದ್ದ ತ್ಯಾಜ್ಯ ಹಾಗೂ ಭಗ್ನಾವಶೇಷಗಳನ್ನು ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಂಡಿವೆ. ಪಿಲ್ಲರ್ ಗಳಿಗೆ ಬಣ್ಣ ಬಳಿಯುವ ಕಾರ್ಯವನ್ನೂ ಮಾಡಲಾಗಿದೆ. ಪಾಲಿಕೆಯಿಂದ ರಸ್ತೆ ಮೇಲ್ಮೈ ದುರಸ್ತಿ, ರಸ್ತೆ ಗುಂಡಿಗಳ ಮುಚ್ಚುವಿಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ ಡಿವೈಡರ್/ಬ್ಯಾರಿಕೇಡ್ಗಳ ಅಳವಡಿಕೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಜಂಕ್ಷನ್ನಲ್ಲಿ ಪ್ರತಿನಿತ್ಯ ಸಹಸ್ರಾರು ನಾಗರಿಕರು ಸಂಚರಿಸುವುದರಿಂದ ಅವರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಪಾದಚಾರಿ ಮಾರ್ಗಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ಸೂಚನೆ ನೀಡಿದರು.
ಜಂಕ್ಷನ್ನ ಮೇಲ್ಸೇತುವೆ ಕೆಳಭಾಗದ ಪಿಲ್ಲರ್ ಗಳಿಗೆ ಬಣ್ಣ ಬಳಿಯುವುದರ ಜೊತೆಗೆ, ನೆಲಕ್ಕೆ ಕರ್ಬ್ ಸ್ಟೋನ್ಗಳನ್ನು ಅಳವಡಿಸಿ ನಾಗರಿಕರು ವಿಶ್ರಾಂತಿ ಪಡೆಯಲು ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ಬೃಹತ್ ನೀರುಗಾಲುವೆಯಲ್ಲಿ ಕೊಳಚೆ ನೀರು ಹರಿದುಬರುತ್ತಿರುವುದನ್ನು ಗಮನಿಸಿದ ಸಚಿವರು, ಕೊಳಚೆ ನೀರು ರಾಜಕಾಲುವೆಗೆ ಹರಿದುಬರುವುದನ್ನು ತಡೆಯಲು ಸಾಕಷ್ಟು ಹಣ ವ್ಯಯ ಮಾಡಿದ್ದರೂ, ಕೊಳಚೆ ನೀರು ಹರಿದುಬರುವುದರಲ್ಲಿ ಯಾವುದೇ ಗಮನಾರ್ಹ ಇಳಿಕೆಯಾಗಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಎಚ್ಎಸ್ಆರ್ ಲೇಔಟ್ ಕಡೆಗೆ ಮಳೆಯಾದ ಸಂದರ್ಭದಲ್ಲಿ ಉಂಟಾಗುವ ಜಲಾವೃತ ಸಮಸ್ಯೆಯನ್ನು ತಡೆಗಟ್ಟಲು ಹೊಸದಾಗಿ ಕಾಲುವೆ ನಿರ್ಮಿಸುವ ಅಗತ್ಯವಿದೆ. ಈ ಸಂಬಂಧ ಬಿ-ಸ್ಮೈಲ್ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಅದರ ಜೊತೆಯಲ್ಲಿಯೇ ಹೊಸ ಕಾಲುವೆ ನಿರ್ಮಾಣಕ್ಕೂ ಕ್ರಮ ಕೈಗೊಳ್ಳುವಂತೆ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಮೇಲ್ಸೇತುವೆ ಕೆಳಭಾಗದ ಪ್ರದೇಶದ ಅಭಿವೃದ್ಧಿಗೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಸಹಭಾಗಿತ್ವದಲ್ಲಿ ಸಿಜಿಐ ಸಂಸ್ಥೆಯು ತನ್ನ ಸಿಎಸ್ಆರ್(ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಉಪಕ್ರಮದಡಿ ಸಹಕಾರ ನೀಡುತ್ತಿದೆ. ಮೈಸೂರು ರೇಷ್ಮೆ ಪರಿಕಲ್ಪನೆಯ ವಿನ್ಯಾಸ ಮತ್ತು ಅನುಷ್ಠಾನದ ಕಾರ್ಯವನ್ನು ಇಂಡಿಯಾ ರೈಸಿಂಗ್ ಟ್ರಸ್ಟ್ ಎಂಬ ಎನ್ಜಿಒ ನಿರ್ವಹಿಸಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.






