ಭಾರತ ಸರ್ಕಾರದ ಬೆಂಗಳೂರಿನ ವಾರ್ತಾ ಶಾಖೆಯಿಂದ ಮೇಘಾಲಯಕ್ಕೆ ಮಾಧ್ಯಮ ಪ್ರವಾಸ

ಮಂಗಳೂರು, ಜ.30: ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರಿನ ವಾರ್ತಾ ಶಾಖೆಯು ಮಾಧ್ಯಮ ಪ್ರತಿನಿಧಿಗಳಿಗಾಗಿ ಮೇಘಾಲಯ ರಾಜ್ಯಕ್ಕೆ ಮಾಧ್ಯಮ ಪ್ರವಾಸವನ್ನು ಕೈಗೊಂಡಿದೆ. 2026ರ ಫೆಬ್ರವರಿ 2ರಿಂದ 7ರ ವರೆಗೆ ಮೇಘಾಲಯದ ವಿವಿಧ ವೈವಿಧ್ಯಮಯ, ಪಾರಂಪರಿಕ ತಾಣಗಳಿಗೆ ಹಾಗೂ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿಯನ್ನು ತಿಳಿಯುವ ಪ್ರಯತ್ನ ಮಾಡಲಿದೆ.
ವಿವಿಧ ಮಾಧ್ಯಮಗಳ 10 ಪ್ರತಿನಿಧಿಗಳು ಸೇರಿದಂತೆ ವಾರ್ತಾ ಶಾಖೆಯ ಇಬ್ಬರು ಸಿಬ್ಬಂದಿ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ಸೋಮವಾರದಂದು ಬೆಂಗಳೂರಿನಿಂದ ತೆರಳಲಿರುವ ತಂಡವು ಮೇಘಾಲಯದಲ್ಲಿ ಕೃಷಿ, ಪ್ರವಾಸೋದ್ಯಮ, ಗಡಿ ಭದ್ರತೆ, ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ವಸ್ತುಸ್ಥಿತಿ ಅವಲೋಕಿಸಿ ಮಾಹಿತಿಯನ್ನು ಸಂಗ್ರಹಿಸಿ ವರದಿ ಮಾಡಲಿದೆ.
ಏಷ್ಯಾ ಖಂಡದ ಅತೀ ಸ್ವಚ್ಛ ಗ್ರಾಮವಾದ ಮಾವ್ಲಿನ್ನಾಂಗ್, ಡಾವ್ಕಿಯಲ್ಲಿರುವ ಉಮ್ಗೋಟ್ ನದಿದಂಡೆಯ ಪಾರದರ್ಶಕ ನೀರಿನ ವೈವಿಧ್ಯತೆ, ಅಸ್ಸಾಂ ರೈಫಲ್ಸ್ ನ ಕಾರ್ಯಚಟುವಟಿಕೆಗಳು, ಜವಳಿ ಮತ್ತು ಕರಕುಶಲ ವಸ್ತುಗಳಿಗೆ, ವಿಶೇಷವಾಗಿ ರೇಷ್ಮೆ ನೇಯ್ಗೆಗೆ ಹೆಸರುವಾಸಿಯಾಗಿರುವ ಉಮ್ದೆನ್-ದಿವಾನ್ ಗ್ರಾಮ ಹಾಗೂ ಯುನೆಸ್ಕೋದಿಂದ ಮಾನ್ಯತೆ ಪಡೆದಿರುವ ನೈಸರ್ಗಿಕ ಬೇರಿನ ಸೇತುವೆಗೆ ಭೇಟಿ ನೀಡಿ ನೈಜ ಮಾಹಿತಿ ಪಡೆಯಲಿದೆ. ಈ ಅಧ್ಯಯನ ಪ್ರವಾಸವನ್ನು ಏಕ ಭಾರತ ಶ್ರೇಷ್ಠ ಭಾರತದ ಪರಿಕಲ್ಪನೆಯಡಿ ಕೈಗೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.







