ನಮ್ಮ ಮೆಟ್ರೋದಲ್ಲಿ ಸರಣಿ ತಾಂತ್ರಿಕ ದೋಷ | ಮೂರು ವರ್ಷಗಳ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ; ಕೇಂದ್ರ ರೈಲ್ವೇ ಸುರಕ್ಷತಾ ಆಯುಕ್ತರಿಂದ ಬಿಎಂಆರ್ಸಿಎಲ್ಗೆ ಪತ್ರ

ಸಾಂದರ್ಭಿಕ ಚಿತ್ರ
ಬೆಂಗಳೂರು : ಹಿಂದಿನ ಮೂರು ವರ್ಷಗಳಲ್ಲಿ ನಮ್ಮ ಮೆಟ್ರೋದಲ್ಲಿ ಸಂಭವಿಸಿರುವ ಎಲ್ಲ ತಾಂತ್ರಿಕ ವೈಫಲ್ಯಗಳು ಹಾಗೂ ವ್ಯತ್ಯಯಗಳ ಕುರಿತು ಸಮಗ್ರ ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ ಸಿಎಲ್) ಸಂಸ್ಥೆಗೆ ಕೇಂದ್ರ ರೈಲ್ವೇ ಸುರಕ್ಷತಾ ಇಲಾಖೆಯ ಮುಖ್ಯ ಆಯುಕ್ತ ಜನಕ್ ಕುಮಾರ್ ಗರ್ಗ್ ಆದೇಶಿಸಿದ್ದಾರೆ.
ಜೂ.23ರಂದು ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷ ಹಾಗೂ ಸೇವಾ ವ್ಯತ್ಯಯ ಉಂಟಾಗಿತ್ತು. ಈ ಕುರಿತು ರೈಲ್ವೆ ಸುರಕ್ಷತಾ ಆಯುಕ್ತರು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆದಿದ್ದ ಸಂಸದ ತೇಜಸ್ವಿ ಸೂರ್ಯ, ‘ಜನವರಿ 2024ರಿಂದ ಇಲ್ಲಿವರೆಗಿನ ಮೂರು ವರ್ಷಗಳ ಅವಧಿಯಲ್ಲಿ ನಮ್ಮ ಮೆಟ್ರೋ ಸೇವೆಯಲ್ಲಿ ಸುಮಾರು 20ಕ್ಕೂ ಹೆಚ್ಚು ತಾಂತ್ರಿಕ ದೋಷ ಮತ್ತು ಸೇವಾ ವ್ಯತ್ಯಯಗಳು ವರದಿಯಾಗಿದ್ದು, ಇದರಲ್ಲಿ ನೇರಳೆ ಮಾರ್ಗ ಅತಿ ಹೆಚ್ಚು ಸ್ಥಗಿತಗೊಂಡಿರುವುದನ್ನು ಉಲ್ಲೇಖಿಸಿದ್ದರು ಹಾಗೂ ನಮ್ಮ ಮೆಟ್ರೋದಲ್ಲಿ ಪದೇ ಪದೇ ಉಂಟಾಗುತ್ತಿರುವ ತಾಂತ್ರಿಕ ದೋಷಗಳ ಬಗ್ಗೆ ತುರ್ತು ಸುರಕ್ಷತಾ ಪರಿಶೋಧನೆ ನಡೆಸಿ ಬಿಎಂಆರ್ಸಿಎಲ್ನಿಂದ ಸಮಗ್ರ ವರದಿ ಪಡೆದುಕೊಳ್ಳುವಂತೆ’ ಕೋರಿದ್ದರು.
ಸಂಸದರ ಪತ್ರಕ್ಕೆ ಅಧಿಕೃತವಾಗಿ ಉತ್ತರಿಸಿರುವ ಕೇಂದ್ರ ರೈಲ್ವೇ ಸುರಕ್ಷತಾ ಇಲಾಖೆಯ ಮುಖ್ಯ ಆಯುಕ್ತ ಜನಕ್ ಕುಮಾರ್ ಗರ್ಗ್, ಜೂನ್ 23ರಂದು ನಡೆದ ಸೇವಾ ವ್ಯತ್ಯಯ ಮಾತ್ರವಲ್ಲದೆ, ಮೂರು ವರ್ಷಗಳಲ್ಲಿ ನಮ್ಮ ಮೆಟ್ರೋ ಕಾರ್ಯಾಚರಣೆಯಲ್ಲಿ ಉಂಟಾಗಿರುವ ಎಲ್ಲ ಸರಣಿ ವ್ಯತ್ಯಯಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರದಲ್ಲಿ ಸೂಚಿಸಿದ್ದಾರೆ.




