‘ಸಿಎಂ ವಿದ್ಯಾರ್ಥಿ ಸಹಾಯ ಹಸ್ತ' ಯೋಜನೆಯ ಅರ್ಜಿ ಸಲ್ಲಿಕೆ ಪೋರ್ಟಲ್‍ಗೆ ಸಚಿವ ಬಸವರಾಜ ರಾಯರಡ್ಡಿ ಚಾಲನೆ

ಬೆಂಗಳೂರು : ಗ್ರಾಮೀಣ ಭಾಗದ ರೈತರು, ಮಧ್ಯಮ ವರ್ಗದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಂದ ವಂಚಿತರಾಗಬಾರದು. ಅವರಿಗೂ ಸರಕಾರಿ ನೌಕರಿ ಪಡೆಯಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ಉಚಿತವಾಗಿ ‘ಸಿಎಂ ವಿದ್ಯಾರ್ಥಿ ಸಹಾಯ ಹಸ್ತ' ಯೋಜನೆಯನ್ನು ಜಾರಿಗೆ ತರುತ್ತಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಗಾಂಧಿನಗರದಲ್ಲಿನ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಅರ್ಹ ಕೋಚಿಂಗ್ ಸೆಂಟರ್ ಗಳನ್ನು ಆಯ್ಕೆ ಮಾಡಿ, ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದ್ದು, ಸದ್ಯದಲ್ಲಿಯೇ ಈ ಯೋಜನೆ ಕಾರ್ಯಾರಂಭ ಮಾಡಲಿದೆ. 9ಕೋಟಿ ರೂ.ವೆಚ್ಚದಲ್ಲಿ ಸುಮಾರು 90 ಸಾವಿರ ಮಂದಿ ವಿದ್ಯಾರ್ಥಿಗಳಿಗೆ ಮೂರು ತಿಂಗಳ ತರಬೇತಿ ನೀಡಲಾಗುವುದು ಎಂದರು.
ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಎಸ್‍ಡಿಎ, ಎಫ್‍ಡಿಎ, ಪಿಡಿಒ, ಪಿಎಸ್ಸೈ ಮತ್ತು ಗೆಜೆಟೆಡ್ ಪ್ರೊಬೆಷನರಿ, ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗಳು ಇದರ ವ್ಯಾಪ್ತಿಗೆ ಬರಲಿದೆ. ಅಭ್ಯರ್ಥಿಗಳು ಗರಿಷ್ಠ 3 ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ಪಡೆಯಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.
ತರಬೇತಿಯು ಎಲ್‍ಎಂಎಸ್, ಅಧ್ಯಯನ ಸಾಮಗ್ರಿಗಳು, ಆನ್‍ಲೈನ್ ತರಗತಿ, ಸಂದೇಹ ನಿವಾರಣಾ ಸೌಲಭ್ಯ, ರೆಕಾರ್ಡೆಡ್ ಮಟೀರಿಯಲ್ ಲಭ್ಯ. ಗುಣಮಟ್ಟದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ನೀಡುವುದು ಸರಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಅರ್ಜಿ ಸಲ್ಲಿಕೆ: ಸೇವಾ ಸಿಂಧು ವೆಬ್‍ಸೈಟ್, ಗ್ರಾಮ ಒನ್ ಕೇಂದ್ರ, ಮೊಬೈಲ್‍ಫೋನ್ ಮೂಲಕವೂ ಅರ್ಜಿ ಸಲ್ಲಿಬಹುದಾಗಿದೆ. ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ದೃಷ್ಟಿಯಿಂದ ಈ ಯೋಜನೆ ಜಾರಿಗೆ ತಂದಿದ್ದು, 1ರಿಂದ 12ನೆ ತರಗತಿಯ ವರೆಗೆ ಸರಕಾರಿ ಶಾಲೆ/ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಮಕ್ಕಳಿಗೆ ಶೇ.7.5ರಷ್ಟು ಮೀಸಲಾತಿ ಸೌಲಭ್ಯ ಸಿಗಲಿದೆ.
ಇದರಿಂದ ಉತ್ತಮ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡಲು ಹೆಚ್ಚಿನ ಅವಕಾಶ ಸಿಗಲಿದೆ. ಗ್ರಾಮೀಣ ಭಾಗದ ಕೃಷಿಕರ ಮಕ್ಕಳು, ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಮಕ್ಕಳು ಇದರಿಂದ ಹೆಚ್ಚಿನ ಅವಕಾಶ ಪಡೆಯಲಿದ್ದಾರೆ ಎಂದು ಬಸವರಾಜ ರಾಯರಡ್ಡಿ ಮಾಹಿತಿ ನೀಡಿದರು.






