‘ಎಸಿ ಕೊಠಡಿ ಬಿಟ್ಟು, ರೈತರ ಸಮಸ್ಯೆಗಳಿಗೆ ಸ್ಪಂದಿಸಿ’ : ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ

ಬೆಂಗಳೂರು : ಹವಾನಿಯಂತ್ರಿತ (ಎಸಿ) ಕೊಠಡಿಯಲ್ಲಿ ಕುಳಿತು ಲೆಕ್ಕಾಚಾರ ಹಾಕುವ ಬದಲು, ನೇರವಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಒಂದು ವೇಳೆ ಈ ಬಗ್ಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ನಗರದ ಕೃಷ್ಣಾ ಭಾಗ್ಯ ಜಲ ನಿಗಮದ ಸಭಾಂಗಣದಲ್ಲಿ ಕಾವೇರಿ ನೀರಾವರಿ ನಿಗಮದ (ಸಿಎನ್‍ಎನ್) ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿನ ಯೋಜನೆಗಳು, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇಕೆದಾಟು ಯೋಜನೆ ಕುರಿತಂತೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು.
ಬೇಸಿಗೆ ಮುಗಿಯುವವರೆಗೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಿಗಮದ ವ್ಯಾಪ್ತಿಗೆ ಸೇರುವ ಒಟ್ಟು 23 ಸಣ್ಣ ಅಣೆಕಟ್ಟುಗಳ ಪೈಕಿ ಮಂದಗೆರೆ ಹಾಗೂ ಹೇಮಗಿರಿ ಅಣೆಕಟ್ಟುಗಳು ಬರೋಬ್ಬರಿ 800 ವರ್ಷಗಳಷ್ಟು ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿವೆ. ತಕ್ಷಣವೇ ಇವುಗಳ ದುರಸ್ತಿಗೆ ಅಂದಾಜು ಪಟ್ಟಿ ಸಿದ್ಧಪಡಿಸಿ, ನೀರಿನ ಸೋರಿಕೆ ತಡೆಯಬೇಕು. ಜೊತೆಗೆ ಹೇಮಾವತಿ ನೀರನ್ನು ಕುಣಿಗಲ್ ಮಾರ್ಗವಾಗಿ ಹುಲಿಯೂರುದುರ್ಗದವರೆಗೆ ಹರಿಸಲು ಬಾಕಿ ಇರುವ 32 ಕಿ.ಮೀ. ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅವರು ನಿರ್ದೇಶನ ನೀಡಿದರು.
ಬಹುನಿರೀಕ್ಷಿತ ಮೇಕೆದಾಟು ಯೋಜನೆ ಕುರಿತು ಉಲ್ಲೇಖಿಸಿದ ಅವರು, ಐದು ವರ್ಷಗಳಲ್ಲಿ ಸುಮಾರು 112.88 ಟಿಎಂಸಿ ಹೆಚ್ಚುವರಿ ಕಾವೇರಿ ನೀರು ಸಮುದ್ರ ಪಾಲಾಗಿದೆ. ಹೀಗಾಗಿ ಬರಗಾಲದಲ್ಲೂ ಎರಡು ರಾಜ್ಯಗಳಿಗೆ ಅನುಕೂಲವಾಗುವ ಹಾಗೂ ಕನಿಷ್ಠ 22 ಟಿಎಂಸಿ ಕುಡಿಯುವ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಯೊಂದೇ ಶಾಶ್ವತ ಪರಿಹಾರವಾಗಿದೆ ಎಂದರು.
ತಮಿಳುನಾಡು ಕೇಳಿದ್ದ ನೀರಿನ ಹರಿವಿನ ಕುರಿತ ಪ್ರಶ್ನೆಗಳಿಗೆ ಎಸ್‍ಒಪಿ ಕಳುಹಿಸುವ ಮೂಲಕ ಈಗಾಗಲೇ ಸಮರ್ಪಕ ಉತ್ತರ ನೀಡಿ ಗೊಂದಲ ಬಗೆಹರಿಸಲಾಗಿದೆ. ಕೇಂದ್ರ ಜಲ ಆಯೋಗವೂ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ, ರಾಜ್ಯದ ಎಲ್ಲ ಸಂಸದರ ಸಹಕಾರದೊಂದಿಗೆ ಪ್ರಧಾನಿಗಳಿಗೆ ಯೋಜನೆಯ ಲಾಭವನ್ನು ಮನವರಿಕೆ ಮಾಡಿಕೊಡಲಾಗುವುದು. ಮುಳುಗಡೆಯಾಗುವ ಪ್ರದೇಶಕ್ಕೆ ಪರ್ಯಾಯ ಭೂಮಿ ದೊರೆತ ತಕ್ಷಣ ಕಾಮಗಾರಿ ಆರಂಭಿಸಿ ಮೂರು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಯೋಜನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತಕ್ಷಣ ಡಿಜಿಟಲೀಕರಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾವೇರಿ ವಿಸ್ತಾರ: ಒಟ್ಟು 11 ಜಿಲ್ಲೆಗಳಲ್ಲಿ 34,273 ಚದರ ಕಿ.ಮೀ. ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಕಾವೇರಿ ಕಣಿವೆಯಲ್ಲಿ ನ್ಯಾಯಾಧಿಕರಣದ ತೀರ್ಪಿನಂತೆ 18.85 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ಬೃಹತ್ ಮತ್ತು ಮಧ್ಯಮ ನೀರಾವರಿಯಡಿ 15.55 ಲಕ್ಷ ಎಕರೆ ಹಾಗೂ ಸಣ್ಣ ನೀರಾವರಿಯಡಿ 3.30 ಲಕ್ಷ ಎಕರೆ ಪ್ರದೇಶ ಸೇರಿದೆ. ಈ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು, ಆಧುನೀಕರಣ ಮತ್ತು ನಿರ್ವಹಣೆ ಮಾಡುವುದು ಕಾವೇರಿ ನೀರಾವರಿ ನಿಗಮದ ಮುಖ್ಯ ಉದ್ದೇಶವಾಗಿದೆ. ಮುಖ್ಯಮಂತ್ರಿಗಳು ಹಾಗೂ ತಾವೇ ಕಾವೇರಿ ಜಲಾನಯನ ಪ್ರದೇಶದವರಾಗಿರುವುದರಿಂದ ಯಾವುದೇ ಕಾಮಗಾರಿಗಳು ಅಪೂರ್ಣವಾಗಬಾರದು ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಸಿದರು.
ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಕುಲಕರ್ಣಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಸೇರಿದಂತೆ ನಿಗಮದ ಹಿರಿಯ ಇಂಜಿನಿಯರ್‍ಗಳು ಉಪಸ್ಥಿತರಿದ್ದರು.






