ಜರ್ಮನಿ ಪ್ರವಾಸ ಕೈಗೊಂಡಿರುವ ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಬೆಂಗಳೂರು : ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಆರ್.ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳ ನಿಯೋಗ ಜರ್ಮನಿ ಪ್ರವಾಸ ಕೈಗೊಂಡಿದೆ.
ಸಚಿವರ ನೇತೃತ್ವದ ನಿಯೋಗವು ಜರ್ಮನಿಯ ನಾರ್ತ್ ರೈನ್-ವೆಸ್ಟ್‍ಫಾಲಿಯಾ(ಎನ್‍ಆರ್‍ಡಬ್ಲ್ಯೂ), ಡಸೆಲ್ಡಾರ್ಫ್ ಸೇರಿದಂತೆ ಜರ್ಮನಿಯ ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡಿ, ಕೌಶಲ್ಯಾಭಿವೃದ್ಧಿ ಹಾಗೂ ಕೌಶಲ್ಯ ವಿನಿಮಯ, ಉದ್ಯೋಗವಾಕಾಶ ಸೇರಿದಂತೆ ಹಲವಾರು ವಿಷಯಗಳ ಕುರಿತು ಅಲ್ಲಿನ ನಿಯೋಗಮಟ್ಟದ ಸಮಾಲೋಚನೆ ಸಭೆ ನಡೆಸುತ್ತಿದೆ.
ಯಾಂತ್ರೀಕೃತ ಕೈಗಾರಿಕೆ, ಮೆಕಾಟ್ರಾನಿಕ್ಸ್ ಮತ್ತು ಸ್ಮಾರ್ಟ್ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಅಪ್ರೆಂಟಿಸ್‍ಶಿಪ್, ಕೌಶಲ್ಯ ಸಹಯೋಗದ ಕುರಿತು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ನೇತೃತ್ವದ ನಿಯೋಗ ಅಧ್ಯಯನ ನಡೆಸಿ ಕೆಲವು ಮಹತ್ವದ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ.
ಬೆಂಗಳೂರಿನ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕರು ವೈ.ಕೆ.ದಿನೇಶ್ ಕುಮಾರ್ ಮತ್ತು ಹಿರಿಯ ಅಧಿಕಾರಿಗಳ ನಿಯೋಗ ಡಸೆಲ್ಡಾರ್ಫ್‍ನಲ್ಲಿ ಜರ್ಮನ್ ನಸಿರ್ಂಗ್ ಅಪ್ರೆಂಟಿಶಿಪ್, ಕರ್ನಾಟಕ ಮತ್ತು ಎನ್‍ಆರ್‍ಡಬ್ಲ್ಯೂ ನಡುವೆ ರಚನಾತ್ಮಕ ಕೌಶಲ್ಯ ವಲಸೆ ಮಾರ್ಗವನ್ನು ರೂಪಿಸುವ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಜಿಟಿಟಿಸಿಯ ತಾಂತ್ರಿಕ ಪಠ್ಯಕ್ರಮವನ್ನು ಜರ್ಮನ್ ತರಬೇತಿ ಮಾನದಂಡಗಳೊಂದಿಗೆ ಅಳವಡಿಸಿಕೊಳ್ಳುವುದು. ಕರ್ನಾಟಕದ ಯುವಕರಿಗೆ ರಚನಾತ್ಮಕ ಪೂರ್ವ-ನಿರ್ಗಮನ ತರಬೇತಿಯನ್ನು ಪ್ರಾಯೋಗಿಕವಾಗಿ ನೀಡುವ ಬಗ್ಗೆ ಅಧಿಕಾರಿಗಳು ಈಗಾಗಲೇ ಸಮಾಲೋಚನೆ ನಡೆಸಿದರು.
ಕರ್ನಾಟಕ ಮತ್ತು ನಾರ್ತ್ ರೈನ್-ವೆಸ್ಟ್ ಫಾಲಿಯಾ ನಡುವೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ದೀರ್ಘಕಾಲೀನ ಕೌಶಲ್ಯಣ ಪಾಲುದಾರಿಕೆ, ಕರ್ನಾಟಕದ ಸಾವಿರಾರು ಯುವಕರು ಜರ್ಮನಿಯಲ್ಲಿ ಉತ್ತಮ ಗುಣಮಟ್ಟದ ವೃತ್ತಿಪರ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಪಡೆಯಲು ಅನುವು ಮಾಡಿಕೊಡುವ ಕುರಿತು ಡಾ.ಪಾಟೀಲ್ ಅಲ್ಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು ಎಂದು ಪ್ರಕಟನೆ ತಿಳಿಸಿದೆ.







