ಇಂಧನ ಭದ್ರತೆಯ ಕಾರ್ಯತಂತ್ರಕ್ಕೆ ಒತ್ತು: ಸಚಿವ ಕೆ.ಜೆ.ಜಾರ್ಜ್
‘ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್, ನೀರಾವರಿ ಪಂಪ್‍ಸೆಟ್‍ಗಳ ಸೌರೀಕರಣಕ್ಕೆ ಆದ್ಯತೆ’

ಬೆಂಗಳೂರು : ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಮತ್ತು ಬೇಡಿಕೆ ಅವಧಿಯಲ್ಲಿನ ವಿದ್ಯುತ್ ಪೂರೈಕೆಗೆ ಅನುಕೂಲವಾಗುವಂತೆ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ವಿಸ್ತರಣೆ, ಕುಸುಮ್-ಸಿ ಯೋಜನೆಯಡಿ ಕೃಷಿ ಫೀಡರ್‍ಗಳ ಸೌರೀಕರಣಕ್ಕೆ ವೇಗ ನೀಡುವ ಜತೆಗೆ ಮುಖ್ಯಮಂತ್ರಿ ಸೌರ ಕೃಷಿ ಯೋಜನೆ (ಸಿಎಂ-ಸ್ಕೈ) ಅನುಷ್ಠಾನದ ಮೂಲಕ ದೀರ್ಘಾವಧಿಯ ಇಂಧನ ಭದ್ರತೆಯ ಕಾರ್ಯತಂತ್ರ ಬಲಪಡಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಗುರುವಾರ ಇಲ್ಲಿನ ಬೆಳಕು ಭವನದಲ್ಲಿ ನಡೆದ ಇಂಧನ ಇಲಾಖೆಯ ದೀರ್ಘಾವಧಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶೇಷವಾಗಿ ಗರಿಷ್ಠ ಬೇಡಿಕೆಯ ಅವಧಿಯಲ್ಲಿ ವಿದ್ಯುತ್ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳುವ ಜತೆಗೆ, ರಾಜ್ಯದ ವಿದ್ಯುತ್ ವ್ಯವಸ್ಥೆಯಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸಲು ಬಹುಆಯಾಮದ ಕಾರ್ಯತಂತ್ರವನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ದೀರ್ಘಾವಧಿಯ ಇಂಧನ ಭದ್ರತೆಯ ಕಾರ್ಯತಂತ್ರದ ಪ್ರಮುಖ ಭಾಗವಾಗಿ ಇಂಧನ ಸಂಗ್ರಹಣಾ ಸಾಮಥ್ರ್ಯವನ್ನು ಹೆಚ್ಚಿಸಲು ನವೀಕರಿಸಬಹುದಾದ ಇಂಧನವನ್ನು ವಿದ್ಯುತ್ ಗ್ರಿಡ್‍ಗೆ ಸಂಯೋಜಿಸುವಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಅಳವಡಿಕೆಗೆ ಒತ್ತು ನೀಡಲಾಗಿದೆ. ಕೆಪಿಟಿಸಿಎಲ್ ಮತ್ತು ಕ್ರೆಡಲ್ ಮೂಲಕ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೇ, ಕೆಪಿಟಿಸಿಎಲ್‍ನ 500 ಮೆ.ವ್ಯಾಟ್/1 ಸಾವಿರ ಮೆ.ವ್ಯಾ. ಪರ್ ಅವರ್ ಸಾಮಥ್ರ್ಯದ ಯೋಜನೆಗಳು ವಿವಿಧ ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿವೆ ಎಂದು ಮಾಹಿತಿ ನೀಡಿದರು.
ಪಾವಗಡ ಸೋಲಾರ್ ಪಾರ್ಕ್‍ನಲ್ಲಿ 250 ಮೆ.ವ್ಯಾಟ್ ಸೌರ ವಿದ್ಯುತ್ ಯೋಜನೆಯೊಂದಿಗೆ 1,100 ಮೆ. ವ್ಯಾಟ್ ಪರ್ ಅವರ್ ಸಾಮಥ್ರ್ಯದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಯೋಜನೆಯನ್ನು ಕ್ರೆಡಲ್ ಕೈಗೆತ್ತಿಕೊಂಡಿದೆ. ಇದಲ್ಲದೇ, ಕುಷ್ಟಗಿಯಲ್ಲಿ 250 ಮೆ.ವ್ಯಾಟ್/500 ಮೆ.ವ್ಯಾಟ್ ಪರ್ ಅವರ್ ಹಾಗೂ ಹುಲಿಯೂರುದುರ್ಗದಲ್ಲಿ 200 ಮೆ.ವ್ಯಾಟ್/400 ಮೆ.ವ್ಯಾಟ್ ಪರ್ ಅವರ್ ಸಾಮಥ್ರ್ಯವನ್ನು ಒಳಗೊಂಡ ಒಟ್ಟು 900 ಮೆ.ವ್ಯಾಟ್ ಪರ್ ಅವರ್ ಸಾಮಥ್ರ್ಯದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ಕುಸುಮ್-ಸಿ ಯೋಜನೆಯಡಿ ಕೃಷಿ ಫೀಡರ್‍ಗಳ ಸೌರೀಕರಣದಲ್ಲೂ ರಾಜ್ಯ ಪ್ರಗತಿ ಸಾಧಿಸಿದ್ದು, ಯೋಜನೆಗಳ ಅನುಷ್ಠಾನವನ್ನು ಚುರುಕುಗೊಳಿಸಲು ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ನಿರ್ದೇಶನ ನೀಡಲಾಗಿದೆ. 2026ರ ಸೆಪ್ಟೆಂಬರ್ 25ರ ವೇಳೆಗೆ ಒಟ್ಟು 2,767 ಮೆ.ವ್ಯಾಟ್ ಸಾಮಥ್ರ್ಯದ 439 ಕುಸುಮ್-ಸಿ ಯೋಜನೆಗಳಿಗೆ ಕಾರ್ಯಾದೇಶ ಪತ್ರಗಳನ್ನು ನೀಡಲಾಗಿದೆ. ಈ ಪೈಕಿ 694 ಮೆ.ವ್ಯಾಟ್ ಸಾಮಥ್ರ್ಯದ 122 ಯೋಜನೆಗಳು ಈಗಾಗಲೇ ಕಾರ್ಯಾರಂಭಗೊಂಡಿವೆ. 2026ರ ಮಾರ್ಚ್ ವರೆಗೆ 395 ಮೆ.ವ್ಯಾಟ್ ಹಾಗೂ ಎಪ್ರಿಲ್ 2026ರಿಂದ ಇದುವರೆಗೆ ಮತ್ತೆ 299 ಮೆ.ವ್ಯಾಟ್ ಸಾಮಥ್ರ್ಯದ ಯೋಜನೆಗಳು ಕಾರ್ಯಾರಂಭಗೊಂಡಿವೆ ಎಂದು ಕೆ.ಜೆ.ಜಾರ್ಜ್ ಹೇಳಿದರು.
ಸಿಎಂ ಸೌರ ಕೃಷಿ ಯೋಜನೆಯನ್ನು ರಾಜ್ಯಾದ್ಯಂತ ಹಂತ-ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಬೆಸ್ಕಾಂ, ಹೆಸ್ಕಾಂ ಮತ್ತು ಜೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 919 ಮೆ.ವ್ಯಾಟ್ ಸಾಮಥ್ರ್ಯದ 159 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಟ್ಟು 1,003.85 ಮೆ.ವ್ಯಾಟ್ ಸಾಮಥ್ರ್ಯದ 119 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕುಸುಮ್-ಬಿ ಮತ್ತು ಸಿ ಹಾಗೂ ಸಿಎಂ ಸ್ಕೈ ಯೋಜನೆಗಳ ಮೂಲಕ ನವೀಕರಿಸಬಹುದಾದ ಇಂಧನ ಸಾಮಥ್ರ್ಯವನ್ನು ಹೆಚ್ಚಿಸುವ ಜತೆಗೆ ಕೃಷಿ ವಲಯಕ್ಕೂ ಬೆಂಬಲ ನೀಡುವುದು ಇಲಾಖೆಯ ಉದ್ದೇಶ, ಈ ನಿಟ್ಟಿನಲ್ಲಿ ಎಲ್ಲ ಎಸ್ಕಾಂಗಳು ನಿಗದಿತ ಗುರಿ ಸಾಧಿಸಿಸಲು ಸೂಚನೆ ನೀಡಲಾಗಿದೆ ಎಂದರು.






