1,616 ಸ್ಥಳಗಳಲ್ಲಿ 22ಸಾವಿರ ಟನ್ ಪಾರಂಪರಿಕ ತ್ಯಾಜ್ಯ ಗುರುತು : ಸಚಿವ ಕೃಷ್ಣಬೈರೇಗೌಡ

ಬೆಂಗಳೂರು: ಪ್ರಾಥಮಿಕ ಸಮೀಕ್ಷೆ ಪ್ರಕಾರ ಪ್ರಸ್ತುತ 1,616 ಸ್ಥಳಗಳಲ್ಲಿ ಸುಮಾರು 22ಸಾವಿರ ಟನ್ ಪಾರಂಪರಿಕ ತ್ಯಾಜ್ಯವನ್ನು ಗುರುತಿಸಲಾಗಿದೆ. ನಗರದಾದ್ಯಂತ ಒಟ್ಟು 1 ಲಕ್ಷ ಟನ್‍ಗಿಂತ ಹೆಚ್ಚು ತ್ಯಾಜ್ಯ ಇರಬಹುದೆಂದು ಅಂದಾಜಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಶನಿವಾರ ನಗರದ ಹೆಬ್ಬಾಳ ಜಂಕ್ಷನ್ ಬಳಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಸ್ವಚ್ಛತಾ ಅಭಿಯಾನದ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಾದ್ಯಂತ 2000ಕ್ಕೂ ಹೆಚ್ಚು ಕಡೆ ಈ ತ್ಯಾಜ್ಯಗಳ ಬ್ಲಾಕ್‍ಸ್ಪಾಟ್‍ಗಳಿವೆ. ರಸ್ತೆ ಬದಿ, ಪಾದಚಾರಿ ಮಾರ್ಗ, ಸಾರ್ವಜನಿಕ ಸ್ಥಳಗಳು, ಖಾಲಿ ನಿವೇಶನಗಳು ಮಾತ್ರವಲ್ಲದೆ ವಿವಿಧ ಇಲಾಖೆಗಳ ಖಾಲಿ ಜಾಗಗಳಲ್ಲಿಯೂ ಪಾರಂಪರಿಕ ತ್ಯಾಜ್ಯ ಸಂಗ್ರಹವಾಗಿದ್ದು, ಇದರಿಂದ ಸಂಚಾರಕ್ಕೂ ಅಡಚಣೆ ಉಂಟಾಗಿದೆ ಎಂದರು.
ಜಿಬಿಎ, ಐದು ನಗರ ಪಾಲಿಕೆಗಳು, ರೈಲ್ವೆ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಕೆ-ರೈಡ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪಾರಂಪರಿಕ ತ್ಯಾಜ್ಯ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಬೃಹತ್ ತ್ಯಾಜ್ಯ ತೆರವು ಕಾರ್ಯಕ್ಕಾಗಿ ಸುಮಾರು 100 ವಾಹನಗಳನ್ನು ನಿಯೋಜಿಸಲಾಗುತ್ತಿದೆ. ಅಭಿಯಾನದಡಿ ಸ್ವಚ್ಛಗೊಳಿಸಲಾದ ಸ್ಥಳಗಳಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ ನಿಗಾ ವಹಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ನಗರದಲ್ಲಿ ಕಟ್ಟಡ ಭಗ್ನಾವಶೇಷಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಅಧಿಕೃತ ಸಂಸ್ಥೆಯನ್ನು ನಿಯೋಜಿಸಲಾಗಿದೆ. ಪ್ರತಿ ಟನ್‍ಗೆ 760 ರೂ. ದರ ನಿಗದಿಪಡಿಸಲಾಗಿದ್ದು, ಇನ್ನು ಮುಂದೆ ಕಟ್ಟಡ ತ್ಯಾಜ್ಯವನ್ನು ನೋಂದಾಯಿತ ಸಂಸ್ಥೆಗಳಿಗೆ ಮಾತ್ರ ನೀಡಬೇಕು. ಸಂಬಂಧಿಸಿದ ಸಂಸ್ಥೆಗಳ ಸಂಪರ್ಕ ವಿವರಗಳನ್ನು ಸಹ ಸಾರ್ವಜನಿಕರಿಗೆ ಒದಗಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.
ನಗರ ಪಾಲಿಕೆಗಳು ನಿಗದಿಪಡಿಸಿರುವ ಸ್ಥಳಗಳಲ್ಲಿಯೇ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ತ್ಯಾಜ್ಯ ಬಿದ್ದಿರುವ ಸ್ಥಳಗಳಲ್ಲಿ ಮತ್ತಷ್ಟು ಕಸವನ್ನು ಎಸೆಯುವ ಪ್ರವೃತ್ತಿ ಹೆಚ್ಚಾಗಿ ನಗರದ ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ. ನಗರದಲ್ಲಿರುವ ಅನೇಕ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಮಣ್ಣು, ತ್ಯಾಜ್ಯ ಹಾಗೂ ಕಳೆ-ಗಿಡಗಳು ಬೆಳೆದು ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಈ ಕುರಿತು ನಾಗರಿಕರಿಂದ ನೂರಾರು ದೂರುಗಳು ಬಂದಿವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಖಾಲಿ ನಿವೇಶನಗಳ ಮಾಲಕರು ಆಗಸ್ಟ್ 15ರೊಳಗೆ ತಮ್ಮ ನಿವೇಶನಗಳನ್ನು ಸ್ವಯಂ ಸ್ವಚ್ಛಗೊಳಿಸಬೇಕು. ಸ್ವಚ್ಛತಾ ಕಾರ್ಯ ನಡೆಸುವ ಸಂಸ್ಥೆಗಳು ಹಾಗೂ ಗುತ್ತಿಗೆದಾರರ ಸಂಪರ್ಕ ವಿವರಗಳನ್ನು ಆಯಾ ನಗರ ಪಾಲಿಕೆಗಳಲ್ಲಿ ಲಭ್ಯವಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಗಸ್ಟ್ 15ರ ನಂತರವೂ ಸ್ವಚ್ಛಗೊಳಿಸದ ನಿವೇಶನಗಳನ್ನು ಸಂಬಂಧಿಸಿದ ನಗರ ಪಾಲಿಕೆ ಸ್ವಚ್ಛಗೊಳಿಸಿ, ಅದಕ್ಕೆ ತಗಲುವ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.






