‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ | ಬೇಜವಾಬ್ದಾರಿ ತೋರುವ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ : ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ನಗರದಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ, ಖಾಲಿ ನಿವೇಶನಗಳ ಸ್ವಚ್ಛತೆ ಹಾಗೂ ಬಿಡಾಡಿ ವಾಹನಗಳ ತೆರವು ಕಾರ್ಯದಲ್ಲಿ ಬೇಜವಾಬ್ದಾರಿತನ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ, ಖಾಲಿ ನಿವೇಶನಗಳ ಸ್ವಚ್ಛತೆ ಹಾಗೂ ಬಿಡಾಡಿ ವಾಹನಗಳ ತೆರವು ಕಾರ್ಯಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಸರಿಯಾಗಿ ಕೆಲಸ ಮಾಡದೆ ಬೇಜವಾಬ್ದಾರಿತನ ತೋರುವ ಖಾಯಂ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಸಿಬ್ಬಂದಿ ಬೇಜವಾಬ್ದಾರಿತನ ತೋರಿದರೆ, ಅವರನ್ನು ಕೆಲಸದಿಂದಲೇ ವಜಾಗೊಳಿಸಲಾಗುವುದು ಎಂದರು.
ನಗರದಲ್ಲಿ ಮೇಲಿನ ಮೂರು ಅಂಶಗಳಲ್ಲಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಶೀಘ್ರದಲ್ಲೇ ನಾಗರಿಕರಿಗೆ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಬಳಿಕ ನಾಗರಿಕರಿಂದ ತ್ಯಾಜ್ಯ ತೆರವುಗೊಳಿಸದಿರುವುದು, ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡದಿರುವುದು ಹಾಗೂ ಬಿಡಾಡಿ ವಾಹನಗಳನ್ನು ತೆರವುಗೊಳಿಸದಿರುವ ಕುರಿತು ದೂರುಗಳು ಬಂದಲ್ಲಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ನಗರದಲ್ಲಿ ಈವರೆಗೆ 1,211 ಕಿ.ಮೀ. ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಇನ್ನೂ ಸುಮಾರು 300 ಕಿ.ಮೀ. ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯ ಬಾಕಿ ಇದೆ. ಆರಂಭದಲ್ಲಿದ್ದ ವೇಗ ಇದೀಗ ಕಾಣುತ್ತಿಲ್ಲ. ಇದೇ ವೇಗದಲ್ಲಿ ಕಾರ್ಯ ಮುಂದುವರಿದರೆ ಇನ್ನೂ ಎರಡು ತಿಂಗಳು ಬೇಕಾಗುತ್ತದೆ. ಆದ್ದರಿಂದ ತೆರವು ಕಾರ್ಯದ ವೇಗವನ್ನು ತಕ್ಷಣ ಹೆಚ್ಚಿಸಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಹಿರಿಯ ಅಧಿಕಾರಿಗಳು ಸ್ವತಃ ಮೇಲ್ವಿಚಾರಣೆ ನಡೆಸಿ, ತೆರವು ಕಾರ್ಯಕ್ಕೆ ವೇಗ ನೀಡಬೇಕು. ತಳಮಟ್ಟದಲ್ಲಿ ನಿರೀಕ್ಷಿತ ಮಟ್ಟದ ಕಾರ್ಯನಿರ್ವಹಣೆ ಕಂಡುಬರುತ್ತಿಲ್ಲ. ಈ ಸಂಬಂಧ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ವಾಸ್ತವಿಕ ಪ್ರಗತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಒತ್ತುವರಿ ತೆರವು ಮಾಡಿದ ಬಳಿಕ ಮತ್ತೆ ಅತಿಕ್ರಮಣ ಮಾಡುತ್ತಿರುವ ಕುರಿತು ನಾಗರಿಕರಿಂದ ಹಲವು ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ, ಮರು ಅತಿಕ್ರಮಣ ಮಾಡಿರುವವರ ಮೆಟೀರಿಯಲ್ ಜಪ್ತಿ ಮಾಡುವ ಜೊತೆಗೆ ನಿಯಮಾನುಸಾರ ಗರಿಷ್ಠ ದಂಡ ವಿಧಿಸಬೇಕು ಎಂದು ಕೃಷ್ಣ ಬೈರೇಗೌಡ ಹೇಳಿದರು.
ಯಾವುದೇ ರೀತಿಯ ಒತ್ತಡ ಅಥವಾ ಭಯಕ್ಕೆ ಒಳಗಾಗದೆ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಉತ್ತಮ ಹೆಸರು ಬಂದಿದೆ. ಆದರೆ ಮರು ಅತಿಕ್ರಮಣ ನಡೆಯಲು ಅವಕಾಶ ನೀಡಿದರೆ, ಅದೇ ಉತ್ತಮ ಕಾರ್ಯಕ್ಕೆ ಧಕ್ಕೆಯಾಗುತ್ತದೆ. ಮರು ಒತ್ತುವರಿಗೆ ಅವಕಾಶ ನೀಡಿದರೆ ಇಲಾಖೆಯ ಕಾರ್ಯವೈಖರಿಗೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಅದಕ್ಕೆ ಯಾವುದೇ ಆಸ್ಪದ ನೀಡಬಾರದು. ಒಂದು ಬಾರಿ ತೆರವುಗೊಳಿಸಿದ ಬಳಿಕ ಕೆಳಹಂತದ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ನಗರಾದ್ಯಂತ ಹಮ್ಮಿಕೊಂಡಿರುವ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಯಾವುದೇ ಅಂತಿಮ ಗಡುವು (ಡೆಡ್‍ಲೈನ್) ಇಲ್ಲ. ನಗರದಲ್ಲಿ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯಲಿದೆ. ಈ ಅಭಿಯಾನದಡಿ ಸಿ/ಡಿ ತ್ಯಾಜ್ಯ ತೆರವು ಕಾರ್ಯ ಸಕ್ರಿಯವಾಗಿ ನಡೆಯುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಒಂದೇ ಕಡೆ ರಾಶಿಯಾಗಿರುವ ಸ್ಥಳಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯು ಸಣ್ಣಪುಟ್ಟ ತ್ಯಾಜ್ಯದ ರಾಶಿಗಳನ್ನೂ ತಪ್ಪದೆ ತೆರವುಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು. ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡ-ಗಂಟಿಗಳು ಹಾಗೂ ಇತರೆ ಅನಗತ್ಯ ವಸ್ತುಗಳನ್ನು ತೆರವುಗೊಳಿಸಬೇಕು. ಎಲ್ಲಾ ಕಾರ್ಯಗಳನ್ನೂ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು. ನೆಲಮಟ್ಟದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಂಡು, ಸಮರ್ಪಕವಾಗಿ ತ್ಯಾಜ್ಯ ತೆರವು ಕಾರ್ಯ ಕೈಗೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ಸಭೆಯಲ್ಲಿ ನಗರ ಪಾಲಿಕೆಗಳ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ.ಜಗದೀಶ್, ಡಾ.ರಾಜೇಂದ್ರ ಕೆ.ವಿ., ಎಲ್ಲಾ ಅಪರ ಆಯುಕ್ತರು, ಮುಖ್ಯ ಇಂಜಿನಿಯರ್‍ಗಳು, ಇಇ, ಎಇಇ, ಎಇ, ಜೆಎಚ್‍ಐ, ಮಾರ್ಷಲ್ ಮೇಲ್ವಿಚಾರಕರು, ಮಾರ್ಷಲ್‍ಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಖಾಲಿ ಸೈಟ್‍ಗಳ ತ್ವರಿತ ಸ್ವಚ್ಛತೆ..:
ಮುಂದಿನ ವಾರವೇ ಖಾಲಿ ಸೈಟ್‍ಗಳ ಸ್ವಚ್ಛತೆಗಾಗಿ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈ ಕುರಿತು ಎಜಿಎಂಗಳ ಮೂಲಕ ನಗರ ಪಾಲಿಕೆ ಆಯುಕ್ತರಿಗೆ ಮಾಹಿತಿ ನೀಡಿ, ಅನುಮೋದನೆ ಪಡೆದು, ಸೂಕ್ತ ಕ್ರಮದೊಂದಿಗೆ ಗುತ್ತಿಗೆದಾರರ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಮುಂದಿನ ವಾರದೊಳಗಾಗಿ ತ್ಯಾಜ್ಯದಿಂದ ತುಂಬಿರುವ ಎಲ್ಲಾ ಖಾಲಿ ಸೈಟ್‍ಗಳನ್ನು ಗುರುತಿಸಿ, ನೇಮಿಸಲಾದ ಗುತ್ತಿಗೆದಾರರ ಮೂಲಕ ಸ್ವಚ್ಛಗೊಳಿಸಬೇಕು. ಖಾಲಿ ಸೈಟ್‍ಗಳ ಸ್ವಚ್ಛತೆಗೆ ತಗಲುವ ವೆಚ್ಚವನ್ನು ನಿಯಮಾನುಸಾರ ಸಂಬಂಧಿಸಿದ ಜಾಗದ ಮಾಲಕರಿಂದ ಆಸ್ತಿ ತೆರಿಗೆ ಮೂಲಕ ವಸೂಲಿ ಮಾಡುವ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ:
ಬಿಡಾಡಿ ವಾಹನಗಳ ಕುರಿತು ‘ಅಸ್ತ್ರಂ ತಂತ್ರಾಂಶ’ದಲ್ಲಿ ದೂರು ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ. ಆದರೂ ಇನ್ನೂ ಅನೇಕ ಅನಾಥ ವಾಹನಗಳಿಗೆ ನೋಟಿಸ್ ನೀಡಿಲ್ಲ ಹಾಗೂ ತಂತ್ರಾಂಶದಲ್ಲಿ ದಾಖಲಿಸಿಲ್ಲ. ಇದೇ ರೀತಿ ಮುಂದುವರಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಅನಾಥ ವಾಹನಗಳ ಗುರುತಿಸುವಿಕೆ, ನೋಟಿಸ್ ಅಂಟಿಸುವುದು, ತಂತ್ರಾಂಶದಲ್ಲಿ ದಾಖಲಿಸುವುದು ಹಾಗೂ ವಿಲೇವಾರಿ ಮಾಡುವುದು ಸೇರಿದಂತೆ ಪ್ರತಿಯೊಂದು ಹಂತವೂ ನಿಯಮಾನುಸಾರ ನಡೆಯಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಪೊಲೀಸ್ ವಶದಲ್ಲಿರುವ ವಾಹನಗಳಿಗೆ ಪ್ರತ್ಯೇಕ ಜಾಗ:
ಸಂಚಾರ ಪೊಲೀಸ್ ಇಲಾಖೆಯು ವಶಪಡಿಸಿಕೊಂಡಿರುವ ವಾಹನಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳಿರುವ ಕಾರಣ, ಅವು ವಿಲೇವಾರಿಯಾಗದೆ ಪೊಲೀಸ್ ಠಾಣೆಗಳ ಬಳಿಯೇ ಉಳಿದಿವೆ. ಪೊಲೀಸ್ ಇಲಾಖೆ ಹಾಗೂ ಆರ್‍ಟಿಒ ವಶದಲ್ಲಿರುವ ವಾಹನಗಳಿಗಾಗಿ ಕಂದಾಯ ಇಲಾಖೆಯ ಜಾಗಗಳನ್ನು ಗುರುತಿಸಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲಾ ವಾಹನಗಳನ್ನು ಆ ಜಾಗಗಳಿಗೆ ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಕೃಷ್ಣ ಬೈರೇಗೌಡ ಹೇಳಿದರು.






