‘ಇ-ಆಸ್ತಿ 2.0’ ಆಸ್ತಿ ದಾಖಲೆ ವ್ಯವಸ್ಥೆ ಲೋಕಾರ್ಪಣೆಗೊಳಿಸಿದ ಸಚಿವ ಕೃಷ್ಣಬೈರೇಗೌಡ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ವ್ಯಾಪ್ತಿಯಲ್ಲಿ ‘ಇ-ಆಸ್ತಿ 2.0’ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ವಿಕಾಸಸೌಧದಲ್ಲಿ ಲೋಕಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಇದು ಸರಳ, ವೇಗದ, ಪಾರದರ್ಶಕ ಮತ್ತು ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆಯಾಗಿದೆ. ಇ-ಆಸ್ತಿ 2.0 ನಲ್ಲಿ ಬಳಕೆದಾರರ ಅನುಭವವನ್ನು ಸುಧಾರಿಸಲಾಗಿದ್ದು, ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸಲಾಗಿದೆ ಎಂದರು.
ಹಳೆಯ ಕಾಲದಲ್ಲಿ ಆಸ್ತಿ ದಾಖಲೆಗಳು ಕಾಗದದ ರೂಪದಲ್ಲಿದ್ದು, ಅವುಗಳಲ್ಲಿ ತಿದ್ದುಪಡಿ, ಬದಲಾವಣೆ ಮಾಡುವ ಸಾಧ್ಯತೆಗಳಿದ್ದವು. ಕಾನೂನುಗಳು ಸರಿಯಾಗಿದ್ದರೂ ಅವುಗಳ ಪಾಲನೆ ಮತ್ತು ಆಸ್ತಿ ದಾಖಲೆಗಳ ನಿರ್ವಹಣೆಯಲ್ಲಿ ಕೆಲವು ಲೋಪಗಳಿದ್ದವು. ಆದರೆ, 2000ನೇ ಇಸವಿಯಲ್ಲಿ ಭೂಮಿ ದಾಖಲೆಗಳ ಗಣಕೀಕರಣದ ಮೂಲಕ ಆಸ್ತಿ ದಾಖಲೆಗಳ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿಯಾಗುವಂತಹ ವ್ಯವಸ್ಥೆಯನ್ನು ನಮ್ಮ ರಾಜ್ಯ ಪರಿಚಯಿಸಿದೆ. ಇದರಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಹಾಗೂ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗಳನ್ನು ಕಡಿಮೆ ಮಾಡಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ 35 ಲಕ್ಷಕ್ಕೂ ಹೆಚ್ಚು ಆಸ್ತಿ ಇದ್ದು, ಈ ಪೈಕಿ 23-24 ಲಕ್ಷಕ್ಕೂ ಹೆಚ್ಚು ಆಸ್ತಿ ದಾಖಲೆಗಳನ್ನು ಗಣಕೀಕರಣಗೊಳಿಸಿ ಡ್ರಾಫ್ಟ್ ಖಾತಾಗಳನ್ನು ಈಗಾಗಲೇ ವಿತರಿಸಲಾಗಿದೆ. ಇದರಲ್ಲಿ ಸುಮಾರು 11 ಲಕ್ಷ ಆಸ್ತಿ ಮಾಲಕರು ತಮ್ಮ ಅಂತಿಮ ಇ-ಖಾತಾವನ್ನು ಪಡೆದುಕೊಂಡಿದ್ದಾರೆ. ಉಳಿದವರು ಅಗತ್ಯ ಮಾಹಿತಿಯನ್ನು ಸಲ್ಲಿಸಿ ತಮ್ಮ ಅಂತಿಮ ಇ-ಖಾತಾವನ್ನು ಪಡೆಯಬಹುದಾಗಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಇ-ಖಾತಾ ವ್ಯವಸ್ಥೆಯ ತಂತ್ರಜ್ಞಾನ ಆಧಾರಿತ ಮತ್ತು ನಾಗರಿಕ ಕೇಂದ್ರಿತ ಸೇವೆಗಾಗಿ ರಾಷ್ಟ್ರೀಯ ಇ-ಆಡಳಿತ 2025 ಚಿನ್ನದ ಪ್ರಶಸ್ತಿಯೂ ಲಭಿಸಿದೆ. ಈ ವ್ಯವಸ್ಥೆಯಿಂದ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ಎದುರಾಗುತ್ತಿದ್ದ ಶೋಷಣೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿದೆ. ಅನೇಕ ಪ್ರಕರಣಗಳಲ್ಲಿ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ವಿವಾದಗಳು ಮತ್ತು ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿಯನ್ನೂ ತಪ್ಪಿಸಲು ಇದು ಸಹಕಾರಿಯಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಹಿಂದಿನ ವ್ಯವಸ್ಥೆಯಲ್ಲಿ ದಾಖಲೆಗಳನ್ನು ಅಪ್ಲೊ ಡ್ ಮಾಡುವ ಪ್ರಕ್ರಿಯೆ ಸೇರಿದಂತೆ ಕೆಲವು ಹಂತಗಳು ನಾಗರಿಕರಿಗೆ ಕಷ್ಟಕರವಾಗಿದ್ದವು. ಇದೀಗ ಇ-ಆಸ್ತಿ 2.0ನಲ್ಲಿ ಬಳಕೆದಾರರ ಅನುಭವವನ್ನು ಸುಧಾರಿಸಲಾಗಿದ್ದು, ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸಲಾಗಿದೆ. ಇ-ಆಸ್ತಿ 2.0 ವ್ಯವಸ್ಥೆಯನ್ನು ಕಾವೇರಿ ತಂತ್ರಾಂಶ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದ್ದು, ಬೆಂಗಳೂರು ಜಲಮಂಡಳಿ ಹಾಗೂ ಬೆಸ್ಕಾಂ ಸೇರಿದಂತೆ ಸಂಬಂಧಿತ ಇಲಾಖೆಗಳ ವ್ಯವಸ್ಥೆಗಳೊಂದಿಗೂ ಸಮನ್ವಯಗೊಳಿಸಲಾಗಿದೆ. ಇದರಿಂದ ನಾಗರಿಕರು ವಿವಿಧ ಕಚೇರಿಗಳಿಗೆ ಅಲೆದಾಡುವ ಅಗತ್ಯ ಕಡಿಮೆಯಾಗಲಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಇ-ಆಸ್ತಿ 2.0ನಲ್ಲಿ ಎಐ ತಂತ್ರಜ್ಞಾನವನ್ನು ದಾಖಲೆಗಳ ಪರಿಶೀಲನೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ಸಹಕಾರಿಯಾಗುವಂತೆ ಬಳಸಲಾಗಿದೆ. ಹೊರನಾಡಿನಲ್ಲಿ ವಾಸಿಸುವ ಆಸ್ತಿ ಮಾಲಕರಿಗೂ ಅನುಕೂಲವಾಗುವಂತೆ ಡಿಜಿಟಲ್ ಸಹಿ ಸೇರಿದಂತೆ ಮತ್ತಷ್ಟು ಡಿಜಿಟಲ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಇ-ಖಾತಾ ವ್ಯವಸ್ಥೆ ದೇಶದಲ್ಲೇ ಉತ್ತಮ ಮಾನದಂಡವನ್ನು ರೂಪಿಸಿದೆ. ಇದೀಗ ಇ-ಆಸ್ತಿ 2.0 ಮೂಲಕ ಇನ್ನಷ್ಟು ಸುಧಾರಿತ, ಪಾರದರ್ಶಕ ಹಾಗೂ ಜನಸ್ನೇಹಿ ವ್ಯವಸ್ಥೆಯನ್ನು ನಾಗರಿಕರಿಗೆ ಸಮರ್ಪಿಸುತ್ತಿದ್ದೇವೆ ಎಂದು ಕೃಷ್ಣ ಬೈರೇಗೌಡ ವಿವರಿಸಿದರು.






