ಟಿನ್ ಫ್ಯಾಕ್ಟರಿ ಜಂಕ್ಷನ್ ಸಮಗ್ರ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಿ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ಕೆ.ಆರ್.ಪುರ ಟಿನ್ ಫ್ಯಾಕ್ಟರಿ ಜಂಕ್ಷನ್ ಅನ್ನು ಜನಸ್ನೇಹಿ ಹಾಗೂ ಪಾದಚಾರಿ ಸ್ನೇಹಿ ಜಂಕ್ಷನ್ ಆಗಿ ಅಭಿವೃದ್ಧಿಪಡಿಸಲು ಸಮಗ್ರ ಮಹಾ ಯೋಜನೆ(ಮಾಸ್ಟರ್ ಪ್ಲಾನ್) ಸಿದ್ಧಪಡಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್.ಪುರ ಟಿನ್‍ಫ್ಯಾಕ್ಟರಿ ಬಳಿ ಎರಡನೇ ಹಂತದ ವಾರ್ಡ್ ಒನ್ ಅಭಿಯಾನಕ್ಕೆ ಶನಿವಾರ ಬೆಳಗ್ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಗರದ ಪ್ರಮುಖ ಸಂಚಾರ ಕೇಂದ್ರವಾಗಿರುವ ಟಿನ್ ಫ್ಯಾಕ್ಟರಿ ಜಂಕ್ಷನ್‍ನಲ್ಲಿನ ರಸ್ತೆ, ಪಾದಚಾರಿ ಮಾರ್ಗ, ಸಾರ್ವಜನಿಕ ಸಾರಿಗೆ ಹಾಗೂ ಇತರ ಮೂಲಸೌಕರ್ಯ ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸಲು ಮಹಾ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಂಕ್ಷನ್‍ನಲ್ಲಿ ಮೆಟ್ರೋ ಮಾರ್ಗಗಳು, ಬ್ಲೂ ಲೈನ್ ಕಾಮಗಾರಿ, ಕೆ.ಆರ್.ಪುರದಿಂದ ಐಟಿಪಿಎಲ್, ವೈಟ್‍ಫೀಲ್ಡ್ ಹಾಗೂ ಮಾರತಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ಮತ್ತು ಹೊರವಲಯದಿಂದ ನಗರಕ್ಕೆ ಬರುವ ವಾಹನಗಳ ಸಂಚಾರ ಒಂದೆಡೆ ಸೇರುವುದರಿಂದ ಸಂಕೀರ್ಣ ಸಂಚಾರ ಸಮಸ್ಯೆ ಎದುರಾಗಿದೆ. ಪ್ರತಿದಿನ ಲಕ್ಷಾಂತರ ಜನರು ಈ ಜಂಕ್ಷನ್ ಮೂಲಕ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ, ವಾಹನಗಳ ಸುಗಮ ಸಂಚಾರದ ಜೊತೆಗೆ ಪಾದಚಾರಿಗಳು ಹಾಗೂ ಸಾರ್ವಜನಿಕ ಸಾರಿಗೆ ಬಳಕೆದಾರರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ನಗರದ ವಿವಿಧ ವಾರ್ಡ್‍ಗಳಲ್ಲಿ ಕಂಡುಬರುವ ಸಣ್ಣಪುಟ್ಟ ಮೂಲಸೌಕರ್ಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವ ಉದ್ದೇಶದಿಂದ ನವೆಂಬರ್ 1ರಿಂದ ವಾರ್ಡ್ ಒನ್ ಅಭಿಯಾನ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 43 ವಾರ್ಡ್‍ಗಳಲ್ಲಿ ಕೈಗೊಂಡಿರುವ ಕಾರ್ಯಗಳು ಸುಮಾರು ಶೇ.90ರಷ್ಟು ಪೂರ್ಣಗೊಂಡಿವೆ. ಎರಡನೇ ಹಂತದಲ್ಲಿ ಬೆಂಗಳೂರಿನಾದ್ಯಂತ ಸುಮಾರು 40 ವಾರ್ಡ್‍ಗಳಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ತಾತ್ಕಾಲಿಕ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸುವುದರ ಜೊತೆಗೆ, ಮೂಲಭೂತ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ನಗರದ ಒಂದು ವಾರ್ಡ್‍ನಲ್ಲಿರುವ ರಸ್ತೆ, ಪಾದಚಾರಿ ಮಾರ್ಗ, ಬೀದಿ ದೀಪ, ಒಳಚರಂಡಿ, ಬೆಸ್ಕಾಂ, ಅರಣ್ಯ ಹಾಗೂ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪರಿಹರಿಸುವ ಬದಲು, ಎಲ್ಲಾ ಇಲಾಖೆಗಳು ಒಂದೇ ತಂಡವಾಗಿ ಕಾರ್ಯನಿರ್ವಹಿಸಿ ಸಮಗ್ರವಾಗಿ ಪರಿಹರಿಸುವುದು ವಾರ್ಡ್ ಒನ್ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ವಾರ್ಡ್‍ನಲ್ಲಿರುವ ಸಣ್ಣಪುಟ್ಟ ಹಾಗೂ ತಾತ್ಕಾಲಿಕ ಸಮಸ್ಯೆಗಳನ್ನು ಒಂದೇ ದಿನದಲ್ಲಿ ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗದಿದ್ದರೂ, ಪ್ರತಿ ವಾರ್ಡ್‍ನಲ್ಲಿ ಮೂರು ಅಥವಾ ನಾಲ್ಕು ದಿನಗಳ ಕಾಲ ತೀವ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಅಭಿಯಾನ ಆರಂಭಿಸಲಾಗಿದೆ. ಮೊದಲ ಹಂತದ ಅನುಭವದ ಆಧಾರದಲ್ಲಿ ಪ್ರತಿ ವಾರ್ಡ್‍ನಲ್ಲಿ ಕನಿಷ್ಠ ಒಂದು ವಾರದ ಕಾಲಾವಕಾಶ ಅಗತ್ಯವಿದೆ ಎಂದು ಈ ವೇಳೆ ಅಧಿಕಾರಿಗಳು ಹೇಳಿದರು.
ನವೆಂಬರ್ ತಿಂಗಳಲ್ಲಿಯೇ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವ ಉದ್ದೇಶವಿದ್ದರೂ, ಅವಸರದಲ್ಲಿ ಅರ್ಧಂ ಬರ್ಧ ಕೆಲಸ ಮಾಡುವುದಕ್ಕಿಂತ ಸಮರ್ಪಕವಾಗಿ ಪೂರ್ಣಗೊಳಿಸುವುದು ಮುಖ್ಯ. ಅಗತ್ಯವಿದ್ದಲ್ಲಿ ಡಿಸೆಂಬರ್ ತಿಂಗಳಲ್ಲೂ ಅಭಿಯಾನವನ್ನು ಮುಂದುವರಿಸಲಾಗುವುದು. ಕಾಮಗಾರಿಗಳ ಗುಣಮಟ್ಟ ಹಾಗೂ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಸಚಿವರು ತಿಳಿಸಿದರು.
ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸ್ಥಳೀಯ ಸಾರ್ವಜನಿಕರು ಟಿನ್ ಫ್ಯಾಕ್ಟರಿ ಜಂಕ್ಷನ್ ಅಭಿವೃದ್ಧಿಗೆ ಹಲವು ಬಾರಿ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಂಕ್ಷನ್‍ನಲ್ಲಿನ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ, ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಭಿವೃದ್ಧಿ ಯೋಜನೆ ರೂಪಿಸುವ ಉದ್ದೇಶದಿಂದ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಈ ಪ್ರದೇಶದಲ್ಲಿ ಈಗಾಗಲೇ ಎರಡು ಮೆಟ್ರೋ ಮಾರ್ಗಗಳು ಕಾರ್ಯನಿರ್ವಹಿಸುತ್ತಿದ್ದು, ಬ್ಲೂ ಲೈನ್ ಕಾಮಗಾರಿಯೂ ನಡೆಯುತ್ತಿದೆ. ಐಟಿಪಿಎಲ್, ವೈಟ್‍ಫೀಲ್ಡ್ ಹಾಗೂ ಮಾರತಹಳ್ಳಿ ಕಡೆಗೆ ತೆರಳುವ ವಾಹನಗಳು, ಹೊರವಲಯದಿಂದ ನಗರಕ್ಕೆ ಬರುವ ವಾಹನಗಳು ಮತ್ತು ರಿಂಗ್ ರಸ್ತೆಯ ಸಂಚಾರ ಇಲ್ಲಿ ಒಂದೆಡೆ ಸೇರುತ್ತವೆ. ಹೀಗಾಗಿ ಜಂಕ್ಷನ್‍ನಲ್ಲಿ ವಾಹನಗಳ ಸಂಚಾರದ ಜೊತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೂ ಸಮರ್ಪಕವಾಗಿ ನಿರ್ವಹಿಸುವ ಅಗತ್ಯವಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಜಂಕ್ಷನ್‍ನ ಸಮಗ್ರ ಅಭಿವೃದ್ಧಿಗೆ ಬಸ್ ಬೇಗಳು, ಬಸ್ ನಿಲ್ದಾಣಗಳು ಹಾಗೂ ದೂರ ಪ್ರಯಾಣದ ಬಸ್‍ಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಮೆಟ್ರೋದಿಂದ ಬಸ್‍ಗೆ, ಬಸ್‍ನಿಂದ ಮೆಟ್ರೋಗೆ ಹಾಗೂ ಇತರ ಸಾರಿಗೆ ವ್ಯವಸ್ಥೆಗಳಿಗೆ ಬದಲಾಯಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು. ಆಟೋ, ಟ್ಯಾಕ್ಸಿ ಹಾಗೂ ಇತರ ವಾಹನಗಳಲ್ಲಿ ಬರುವವರು ಸಾರ್ವಜನಿಕ ಸಾರಿಗೆಯನ್ನು ಸುಲಭವಾಗಿ ಬಳಸಲು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ಜಂಕ್ಷನ್‍ನಲ್ಲಿರುವ ರಸ್ತೆ ತಿರುವುಗಳನ್ನು ಸುಧಾರಿಸಿ, ಅಗತ್ಯವಿರುವ ಕಡೆಗಳಲ್ಲಿ ರಸ್ತೆ ಅಗಲೀಕರಣ ಕೈಗೊಳ್ಳಬೇಕು. ಜಂಕ್ಷನ್‍ನ ವಿನ್ಯಾಸವನ್ನು ವೈಜ್ಞಾನಿಕವಾಗಿ ರೂಪಿಸಿ, ವಾಹನಗಳ ಸಂಚಾರ ಸುಗಮವಾಗುವಂತೆ ಕ್ರಮ ವಹಿಸಬೇಕು. ಫ್ರೀ ಲೆಫ್ಟ್ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಅಗತ್ಯ ರಸ್ತೆ ಸುಧಾರಣಾ ಕಾಮಗಾರಿಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಜಂಕ್ಷನ್‍ನ ಪ್ರತಿಯೊಂದು ಭಾಗವನ್ನೂ ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದರು.
ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕೆ.ಆರ್.ಪುರ ಕ್ಷೇತ್ರದ ಶಾಸಕ ಬೈರತಿ ಬಸವರಾಜ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್, ಅಪರ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಇಂಜಿನಿಯರ್‍ಗಳಾದ ಲೋಕೇಶ್, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.






