ಅಕ್ರಮ ಒಎಫ್‍ಸಿ ಕೇಬಲ್‍ಗಳ ಕಡಿವಾಣಕ್ಕೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಆಪ್ಟಿಕಲ್ ಫೈಬರ್ ಕೇಬಲ್‍ಗಳಿಗೆ(ಒಎಫ್‍ಸಿ) ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಹಾಗೂ ಇಡೀ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಿ ಏಕರೂಪತೆ ತರಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಬುಧವಾರ ಜಿಬಿಎ ಕೇಂದ್ರ ಕಚೇರಿಯ ಸಭಾಂಗಣ-1ರಲ್ಲಿ ಒಎಫ್‍ಸಿ ಕೇಬಲ್‍ಗಳ ನಿರ್ವಹಣೆ ಮತ್ತು ನಿಯಂತ್ರಣ ಕುರಿತು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಸಚಿವರು ಮಹತ್ವದ ಸೂಚನೆ ನೀಡಿದರು.
ನಗರದಲ್ಲಿ 5 ಲಕ್ಷಕ್ಕೂ ಹೆಚ್ಚು ಅನಧಿಕೃತ ಓವರ್ ಹೆಡ್ ಕೇಬಲ್‍ಗಳು ಹಾಗೂ ಸುಮಾರು 12,000 ಕಿ.ಮೀ. ನಷ್ಟು ಅಕ್ರಮ ಭೂಗತ ಕೇಬಲ್‍ಗಳಿರುವುದು ವರದಿಯಾಗಿದೆ. ಅಲ್ಲದೆ, 3,460 ಕಿ.ಮೀ. ಓವರ್ ಹೆಡ್ ಕೇಬಲ್‍ಗಳಿದ್ದು, ಮರಗಳ ಮೇಲೆ 30ಕ್ಕೂ ಹೆಚ್ಚು ನಿರುಪಯುಕ್ತ ಕೇಬಲ್‍ಗಳು ನೇತಾಡುತ್ತಿವೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಈ ಸಮಸ್ಯೆಯನ್ನು ಬಗೆಹರಿಸಲು ಗುತ್ತಿಗೆದಾರರೊಂದಿಗೆ ಚರ್ಚಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅನಧಿಕೃತ ಕೇಬಲ್‍ಗಳನ್ನು ಘೋಷಿಸಿಕೊಳ್ಳಲು ಮತ್ತು ಒಂದು ಬಾರಿ ಶುಲ್ಕ ಪಾವತಿಸಿ ಸಕ್ರಮಗೊಳಿಸಿಕೊಳ್ಳಲು ನಿಗದಿತ ಕಾಲಾವಕಾಶ ನೀಡಲಾಗುವುದು. ನಿಗದಿತ ಗಡುವಿನ ನಂತರವೂ ಸಕ್ರಮಗೊಳಿಸದ ಮತ್ತು ಅಪಾಯಕಾರಿಯಾಗಿ ನೇತಾಡುವ ಅನಧಿಕೃತ ಕೇಬಲ್‍ಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ತೆರವುಗೊಳಿಸಬೇಕು ಎಂದು ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.
ಟೆಲಿಕಾಂ ಮತ್ತು ಇಂಟರ್‍ನೆಟ್ ಸೇವೆ ಒದಗಿಸುವ ಸಂಸ್ಥೆಗಳು ಈಗಾಗಲೇ ಅನಧಿಕೃತವಾಗಿ ಅಳವಡಿಸಿರುವ ಕೇಬಲ್‍ಗಳನ್ನು ನಿಯಮಾನುಸಾರ ಕ್ರಮಬದ್ಧಗೊಳಿಸಿಕೊಳ್ಳಲು ಸೂಕ್ತ ಕಾಲಾವಕಾಶ ನೀಡಬೇಕು. ನಿಗದಿತ ಅವಧಿಯೊಳಗೆ ಕೇಬಲ್‍ಗಳನ್ನು ಕ್ರಮಬದ್ಧಗೊಳಿಸದಿದ್ದಲ್ಲಿ ಸಂಬಂಧಪಟ್ಟ ನಗರ ಪಾಲಿಕೆಗಳ ವತಿಯಿಂದಲೇ ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ಸೂಚಿಸಿದರು.
ಓಎಫ್‍ಸಿ ಕೇಬಲ್ ಅಳವಡಿಕೆಗೆ ಸಂಬಂಧಿಸಿದಂತೆ ನಗರ ಪಾಲಿಕೆಗಳ ಸಾಫ್ಟ್‍ವೇರ್ ಮೂಲಕ ಅರ್ಜಿ ಸಲ್ಲಿಸುವ ಸಂಸ್ಥೆಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ನಿಗದಿತ ಶುಲ್ಕವನ್ನು ಆನ್‍ಲೈನ್ ಮೂಲಕ ಪಾವತಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದರು.
ಸಭೆಯಲ್ಲಿ ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೆÇಮ್ಮಲ ಸುನೀಲ್ ಕುಮಾರ್, ಶಿಲ್ಪಾ ನಾಗ್, ರಮೇಶ್ ಕೆ.ಎನ್., ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಅಪರ ಆಯುಕ್ತ ವೆಂಕಟಾಚಲಪತಿ, ನವೀನ್ ಕುಮಾರ್ ರಾಜು, ಓಎಫ್‍ಸಿ ಅಧೀಕ್ಷಕ ಇಂಜಿನಿಯರ್ ಧರ್ಮಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹೊಸ ರಸ್ತೆ ಅಗೆಯುವಂತಿಲ್ಲ: ಹೊಸದಾಗಿ ನಿರ್ಮಿಸಿದ ರಸ್ತೆಗಳನ್ನು ಯಾವುದೇ ಕಾರಣಕ್ಕೂ ಅಗೆಯಲು ಅನುಮತಿ ನೀಡಬಾರದು. ವೈಟ್ ಟಾಪಿಂಗ್ ಮತ್ತು ಟೆಂಡರ್ ಶ್ಯೂರ್ ರಸ್ತೆಗಳಲ್ಲಿರುವ ಡಕ್ಟ್ ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜಂಕ್ಷನ್ ಬಾಕಕ್ಸ್ ಗಳನ್ನು ಆಸ್ತಿಯ ಅಂಚಿನಲ್ಲಿ ಹಾಗೂ 7 ಅಡಿ ಎತ್ತರದಲ್ಲಿ ಅಳವಡಿಸಬೇಕು. ಅಗತ್ಯವಿದ್ದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡಿ ಪ್ರತ್ಯೇಕ ಬೈಲಾ ರೂಪಿಸಿಕೊಳ್ಳಲು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.






